ADVERTISEMENT

ನಾಗ್ಪುರ ಹಿಂಸಾಚಾರ: ಮಹಿಳಾ ಕಾನ್‌ಸ್ಟೆಬಲ್ ಮೇಲೆ ಗಲಭೆಕೋರರಿಂದ ಲೈಂಗಿಕ ದೌರ್ಜನ್ಯ

ಪಿಟಿಐ
Published 19 ಮಾರ್ಚ್ 2025, 10:15 IST
Last Updated 19 ಮಾರ್ಚ್ 2025, 10:15 IST
<div class="paragraphs"><p>ಪೊಲೀಸ್ ಸಿಬ್ಬಂದಿ&nbsp;</p></div>

ಪೊಲೀಸ್ ಸಿಬ್ಬಂದಿ 

   

–ಪಿಟಿಐ ಚಿತ್ರ

ನಾಗ್ಪುರ: ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬ್‌ ಸಮಾಧಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ನಾಗ್ಪುರದಲ್ಲಿ ನಡೆಸಿದ ಪ್ರತಿಭಟನೆಯು ಹಿಂಸಾಚಾರಕ್ಕೆ ಕಾರಣವಾಗಿತ್ತು. ಇದೇ ಸಂದರ್ಭದಲ್ಲಿ ಗಲಭೆಕೋರರ ಗುಂಪೊಂದು ಮಹಿಳಾ ಕಾನ್‌ಸ್ಟೆಬಲ್‌ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಗಲಭೆಕೋರರು ಮಹಿಳಾ ಕಾನ್‌ಸ್ಟೆಬಲ್ ಅವರನ್ನು ಅನುಚಿತವಾಗಿ ಮುಟ್ಟಿ, ವಿವಸ್ತ್ರಗೊಳಿಸಲು ಪ್ರಯತ್ನಿಸಿದ್ದಾರೆ. ಜತೆಗೆ, ಮಹಿಳಾ ಕಾನ್‌ಸ್ಟೆಬಲ್ ಅವರತ್ತ ಅಶ್ಲೀಲ ಸನ್ನೆ ತೋರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಹಿಂಸಾಚಾರದ ವೇಳೆ ಗಲಭೆಕೋರರು ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್‌ಗಳನ್ನು ಎಸೆದಿದ್ದಾರೆ. ಘಟನೆ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಇದುವರೆಗೆ 51 ಗಲಭೆಕೋರರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಐದು ಎಫ್‌ಐಆರ್‌ ದಾಖಲಿಸಲಾಗಿದೆ. ಹಿಂಸಾಚಾರದ ಹಿನ್ನೆಲೆಯಲ್ಲಿ ನಗರದ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಯಲ್ಲಿದೆ ಎಂದು ನಾಗ್ಪುರ ಪೊಲೀಸ್‌ ಆಯುಕ್ತ ರವೀಂದ್ರ ಕುಮಾರ್‌ ಸಿಂಗಾಲ್‌ ಮಾಹಿತಿ ನೀಡಿದ್ದಾರೆ.

ಏನಿದು ಘಟನೆ?

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬ್‌ ಸಮಾಧಿಯನ್ನು ತೆರವು ಮಾಡುವಂತೆ ಆಗ್ರಹಿಸಿ ಬಲಪಂಥೀಯ ಸಂಘಟನೆಗಳು (ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳ) ಪ್ರತಿಭಟನೆ ನಡೆಸಿದ್ದವು. ಈ ಸಂದರ್ಭದಲ್ಲಿ ಸಮಾಧಿ ಪ್ರತಿಕೃತಿಗೆ ಬೆಂಕಿ ಹಚ್ಚಲಾಗಿತ್ತು. ಆದರೆ ಪ್ರತಿಭಟನೆಯಲ್ಲಿ ಸಮುದಾಯವೊಂದರ ಪವಿತ್ರ ಗ್ರಂಥಕ್ಕೆ ಬೆಂಕಿ ಹಾಕಲಾಗಿದೆ ಎಂಬ ವದಂತಿ ಹರಡಿದ ನಂತರ ನಾಗ್ಪುರದ ಮಹಲ್‌ ಪ್ರದೇಶದ ಚಿಟನಿಸ್‌ ಪಾರ್ಕ್‌ನಲ್ಲಿ ಸೋಮವಾರ ಸಂಜೆ 7.30ರ ಸುಮಾರಿಗೆ ಹಿಂಸಾಚಾರ ಆರಂಭವಾಗಿತ್ತು. ನೂರಾರು ಜನರ ಗುಂಪು ಪೊಲೀಸರತ್ತ ಕಲ್ಲು ತೂರಾಟ ನಡೆಸಿ, ಕೆಲವೆಡೆ ಪೆಟ್ರೋಲ್‌ ಬಾಂಬ್‌ ಎಸೆದಿತ್ತು.

ನಂತರ ಹಂಸಪುರಿ ಪ್ರದೇಶದಲ್ಲಿ ರಾತ್ರಿ ಹಿಂಸಾಚಾರ ಭುಗಿಲೆದ್ದಿತ್ತು. ಉದ್ರಿಕ್ತ ಗುಂಪು ಹಲವು ವಾಹನಗಳಿಗೆ ಬೆಂಕಿ ಇಟ್ಟಿತ್ತು. ಆ ಪ್ರದೇಶದ ಮನೆಗಳು ಮತ್ತು ಕ್ಲಿನಿಕ್‌ಗಳಿಗೆ ಬೆಂಕಿ ಇಟ್ಟು, ಧ್ವಂಸಗೊಳಿಸಿತು ಎಂದು ಪೊಲೀಸರು ತಿಳಿಸಿದ್ದರು.

ಹಿಂಸಾಚಾರದಲ್ಲಿ ಮೂವರು ಉಪ ಪೊಲೀಸ್‌ ಆಯುಕ್ತರು ಸೇರಿ 33 ಪೊಲೀಸ್‌ ಸಿಬ್ಬಂದಿ ಹಾಗೂ ಐವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ನಾಗ್ಪುರ ಉಸ್ತುವಾರಿ ಸಚಿವ ಚಂದ್ರಶೇಖರ್‌ ಬಾವಂಕುಲೆ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.