ADVERTISEMENT

ಸ್ಥಿರಾಸ್ತಿ ಮಾಹಿತಿ ನೀಡದ ಐಎಎಸ್‌ ಅಧಿಕಾರಿಗಳನ್ನು ಬಹಿರಂಗಪಡಿಸಿ: ಸಂಸದೀಯ ಸಮಿತಿ

ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 19:24 IST
Last Updated 28 ಮಾರ್ಚ್ 2022, 19:24 IST
   

ನವದೆಹಲಿ: ಐಎಎಸ್ ಅಧಿಕಾರಿಗಳು ತಮ್ಮ ಮಾಲೀಕತ್ವದ ಸ್ಥಿರಾಸ್ತಿಗಳ ವಾರ್ಷಿಕ ವರದಿಯನ್ನು ಸಲ್ಲಿಸುವುದು ಕಡ್ಡಾಯ. ಆದರೆ, ಸತತ ಮೂರು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಕನಿಷ್ಠ 32 ಐಎಎಸ್‌ ಅಧಿಕಾರಿಗಳು ಮತ್ತು ಮೂರು ವರ್ಷಗಳಿಂದ 44 ಮಂದಿ ಸ್ಥಿರಾಸ್ತಿಗಳ ವಾರ್ಷಿಕ ಮಾಹಿತಿಯನ್ನು ಸಲ್ಲಿಸಿಲ್ಲ. ಎರಡು ವರ್ಷಗಳಿಂದ 64 ಅಧಿಕಾರಿಗಳು ಈ ಮಾಹಿತಿ ನೀಡಿಲ್ಲ.

2021ರಲ್ಲಿ 158 ಐಎಎಸ್‌ ಅಧಿಕಾರಿಗಳು, 2020ರಲ್ಲಿ 146 ಅಧಿಕಾರಿಗಳು,2019 ರಲ್ಲಿ 1
28 ಮತ್ತು 2018 ರಲ್ಲಿ 135 ಅಧಿಕಾರಿಗಳು ತಮ್ಮ ಸ್ಥಿರಾಸ್ತಿಗಳ ಬಗ್ಗೆ ವಾರ್ಷಿಕ ಮಾಹಿತಿ ಸಲ್ಲಿಸಿಲ್ಲ ಎಂದು ಬಿಜೆಪಿ ಸಂಸದ ಸುಶೀಲ್‌ ಕುಮಾರ್‌ ಮೋದಿ ನೇತೃತ್ವದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಅಧೀನದಲ್ಲಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ ತಿಳಿಸಿದೆ.

ಮಾಹಿತಿ ಸಲ್ಲಿಸದ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಸಮಿತಿಯು, ಸ್ಥಿರಾಸ್ತಿಗಳ ವಾರ್ಷಿಕ ಮಾಹಿತಿ ಸಲ್ಲಿಸದ ಅಧಿಕಾರಿಗಳ ಹೆಸರುಗಳನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕುರಿತು ಸಮಿತಿಯು ಇತ್ತೀಚೆಗೆ ಸಂಸತ್ತಿನಲ್ಲಿ ವರದಿ ಮಂಡಿಸಿದೆ.

ADVERTISEMENT

ವೃತ್ತಿ ಪ್ರಗತಿಗೆ ಮತ್ತು ದಾಖಲಾತಿಗೆ ಜಾಗೃತದಳದ ಅನುಮತಿ ಅಗತ್ಯ. ಮುಂದಿನ ವರ್ಷದ ಜನವರಿ 31 ರೊಳಗೆ ಹಿಂದಿನ ವರ್ಷದ ಸ್ಥಿರಾಸ್ತಿಗಳ ಮಾಹಿತಿ ಸಲ್ಲಿಸಲು ವಿಫಲರಾದ ಅಧಿಕಾರಿಗಳಿಗೆ ಜಾಗೃತದಳದ ಅನುಮತಿ ನಿರಾಕರಿಸಲಾಗುವುದು ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈ ಹಿಂದೆ ನಿರ್ಧರಿಸಿತ್ತು. ಆದರೆ, ಈ ಕಾರ್ಯವು ಪರಿಣಾಮಕಾರಿಯಾಗಿಲ್ಲ ಎಂದು ಸಮಿತಿಯು ಸಚಿವಾಲಯಕ್ಕೆ ತಿಳಿಸಿದೆ.

ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪ್ರಸ್ತಾವವನ್ನು ರೂಪಿಸಲು ಮತ್ತು ಪ್ರಸ್ತುತ ಸ್ಥಿತಿಯ ಕುರಿತು ಒಂದು ತಿಂಗಳೊಳಗೆ ಟಿಪ್ಪಣಿಯನ್ನು ಸಲ್ಲಿಸಲು ಸಮಿತಿಯು ಸೂಚಿಸಿದೆ. ಇಲಾಖೆಯ ವೆಬ್‌ಸೈಟ್‌ನಲ್ಲಿ ತಪ್ಪಿತಸ್ಥ ಅಧಿಕಾರಿಗಳ ಹೆಸರುಗಳನ್ನು ಪ್ರಕಟಿಸಲು ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಸಮಿತಿ ಶಿಫಾರಸು ಮಾಡಿದೆ. ಪ್ರತಿ ಅಧಿಕಾರಿಯ ವಿರುದ್ಧ ಒಂದು ತಿಂಗಳ ಅವಧಿಯಲ್ಲಿ ತೆಗೆದುಕೊಂಡ ಕ್ರಮಗಳ ವಿವರಗಳೊಂದಿಗೆ ಕರ್ತವ್ಯಲೋಪ ಎಸಗುವ ಅಧಿಕಾರಿಗಳ ಹೆಸರುಗಳನ್ನು ಒದಗಿಸುವಂತೆ ಸಮಿತಿಯು ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.