ADVERTISEMENT

ನ್ಯಾನೊ ಯೂರಿಯಾ, DAP ಬಳಕೆಗೆ ಉತ್ತೇಜನ; 3 ಹೊಸ ಘಟಕ ಸ್ಥಾಪನೆ: ಸಚಿವೆ ಅನುಪ್ರಿಯಾ

ಪಿಟಿಐ
Published 29 ಜುಲೈ 2025, 11:32 IST
Last Updated 29 ಜುಲೈ 2025, 11:32 IST
<div class="paragraphs"><p>ಡ್ರೋನ್ ಮೂಲಕ ನ್ಯಾನೊ ಯುರಿಯೋ ಸಿಂಪಡಣೆ</p></div>

ಡ್ರೋನ್ ಮೂಲಕ ನ್ಯಾನೊ ಯುರಿಯೋ ಸಿಂಪಡಣೆ

   

ನವದೆಹಲಿ: ‘ವಾರ್ಷಿಕ 17 ಕೋಟಿ ಬಾಟಲಿ ನ್ಯಾನೊ ಯೂರಿಯಾ ತಯಾರಿಕೆ ಸಾಮರ್ಥ್ಯದ ಮೂರು ಘಟಕಗಳನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ತೆರೆಯಲು ಸರ್ಕಾರ ನಿರ್ಧರಿಸಿದೆ’ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರು ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

‘ದೇಶದಾದ್ಯಂತ ನ್ಯಾನೊ ಯೂರಿಯಾ ತಯಾರಿಕಾ ಘಟಕ ಸ್ಥಾಪನೆಯಲ್ಲಿ ಸರ್ಕಾರ ನೇರವಾಗಿ ಭಾಗವಹಿಸುವುದಿಲ್ಲ. ವಾರ್ಷಿಕ 27.22 ಕೋಟಿ ಬಾಟಲಿ (ಪ್ರತಿ ಬಾಟಲಿ 500 ಮಿ.ಲೀ.) ಸಾಮರ್ಥ್ಯದ ಒಟ್ಟು ಏಳು ತಯಾರಿಕಾ ಘಟಕಗಳನ್ನು ರಸಗೊಬ್ಬರ ತಯಾರಿಕಾ ಕಂಪನಿಗಳು ಸ್ಥಾಪಿಸಲಿವೆ’ ಎಂದು ಹೇಳಿದ್ದಾರೆ.

ADVERTISEMENT

ನ್ಯಾನೊ ಡೈ ಅಮೋನಿಯಂ ಫಾಸ್ಪೇಟ್‌ (DAP) ತಯಾರಿಸುವ ಮೂರು ಘಟಕಗಳನ್ನು ರಸಗೊಬ್ಬರ ಕಂಪನಿಗಳು ಸ್ಥಾಪಿಸಲಿವೆ. ಇದರ ಒಟ್ಟು ಉತ್ಪಾದನಾ ಸಾಮರ್ಥ್ಯ ವಾರ್ಷಿಕ 7.64 ಕೋಟಿ ಬಾಟಲಿ (ಪ್ರತಿ ಬಾಟಲಿ 500 ಮಿ.ಲೀ) ತಯಾರಿಕಾ ಸಾಮರ್ಥ್ಯ ಹೊಂದಲಿದೆ ಎಂದು ತಿಳಿಸಿದ್ದಾರೆ.

‘ಆದಿವಾಸಿಗಳು ಅಧಿಕ ಸಂಖ್ಯೆಯಲ್ಲಿರುವ ಪ್ರದೇಶಗಳನ್ನೂ ಒಳಗೊಂಡು ದೇಶದಾದ್ಯಂತ 10.68 ಕೋಟಿ ಬಾಟಲಿಯಷ್ಟು ನ್ಯಾನೊ ಯೂರಿಯಾ ಹಾಗೂ 2.75 ಕೋಟಿ ಬಾಟಲಿಯಷ್ಟು ನ್ಯಾನೊ ಡಿಎಪಿ ಗೊಬ್ಬರವನ್ನು ರಸಗೊಬ್ಬರ ಕಂಪನಿಗಳು ವಿತರಿಸಿವೆ. ನ್ಯಾನೊ ಗೊಬ್ಬರಗಳ ಬಳಕೆಯನ್ನು ಉತ್ತೇಜಿಸುವ ಹಾಗೂ ಜನಪ್ರಿಯಗೊಳಿಸುವ ಸಂಬಂಧ ರಾಜ್ಯ ಸರ್ಕಾರಗಳೊಂದಿಗೆ ಕೇಂದ್ರ ಸರ್ಕಾರವು ನಿರಂತರ ಸಂಪರ್ಕ ಹೊಂದಿದೆ’ ಎಂದು ಅನುಪ್ರಿಯಾ ಪಟೇಲ್ ತಿಳಿಸಿದ್ದಾರೆ. 

‘ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳಲ್ಲಿ ನ್ಯಾನೊ ಯೂರಿಯಾ ಮತ್ತು ನ್ಯಾನೊ ಡಿಎಪಿ ಲಭ್ಯ. ರಸಗೊಬ್ಬರ ಇಲಾಖೆ ಮೂಲಕ ಬೇಡಿಕೆಗೆ ಅನುಗುಣವಾಗಿ ಪ್ರತಿ ತಿಂಗಳು ಪೂರೈಕೆ ಮಾಡಲಾಗುತ್ತಿದೆ. ದೇಶದ 15 ಕೃಷಿ ವಲಯಗಳಲ್ಲಿ ನ್ಯಾನೊ ಡಿಎಪಿಗಳ ಬಳಕೆ ಅಳವಡಿಸಲು ಮಹಾ ಅಭಿಯಾನವನ್ನು ಆಯೋಜಿಸಲು ಸಚಿವಾಲಯವು ವಿವಿಧ ರಸಗೊಬ್ಬರ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ದೇಶದ ಸುಮಾರು ನೂರು ಜಿಲ್ಲೆಗಳಲ್ಲಿ ಕ್ಷೇತ್ರವಾರ ಪ್ರಾತ್ಯಕ್ಷಿಕೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನೂ ಕಂಪನಿಗಳು ನಡೆಸುತ್ತಿವೆ’ ಎಂದು ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.