ನಾರಾಯಣಪುರ: ಕ್ರೈಸ್ತ ಸನ್ಯಾಸಿನಿಯರು ಬಂಧನಕ್ಕೀಡಾಗಲು ಕಾರಣವಾದ ಮತಾಂತರ ಪ್ರಕರಣದ ಸಂತ್ರಸ್ತೆಯು ತಾನು ನೀಡಿದ ಹೇಳಿಕೆ ತನ್ನದಲ್ಲ, ಆ ಸುಳ್ಳು ಹೇಳಿಕೆ ನೀಡುವಂತೆ ಬಜರಂಗದಳದ ಕಾರ್ಯಕರ್ತರು ಒತ್ತಾಯಿಸಿ ಹಲ್ಲೆ ನಡೆಸಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಸಂತ್ರಸ್ತೆಯನ್ನು ಕಮಲೇಶ್ವರಿ ಪ್ರಧಾನ್ (21) ಎಂದು ಗುರುತಿಸಲಾಗಿದೆ.
‘ನಾನು ನಾಲ್ಕು ವರ್ಷಗಳಿಂದ ಕ್ರೈಸ್ತ ಧರ್ಮವನ್ನು ಅನುಸರಿಸುತ್ತಿದ್ದೇನೆ. ನನ್ನ ಕುಟುಂಬದ ಸಹಮತದೊಂದಿಗೆ ಕ್ರೈಸ್ತ ಸನ್ಯಾಸಿನಿಯರ ಜತೆಗೆ ತೆರಳುತ್ತಿದ್ದೆ. ಆದರೆ, ಬಜರಂಗದಳದ ಕಾರ್ಯಕರ್ತರು ನನ್ನನ್ನು ಬೆದರಿಸಿ, ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಎನ್ನುವಂತ ಹೇಳಿಕೆ ಕೊಡಿಸಿದರು. ಪೊಲೀಸರು ಕೂಡ ನನ್ನ ಹೇಳಿಕೆಯನ್ನು ಸರಿಯಾಗಿ ದಾಖಲಿಸಿಕೊಂಡಿಲ್ಲ.
ಬಂಧನಕ್ಕೀಡಾಗಿರುವ ಕ್ರೈಸ್ತ ಸನ್ಯಾಸಿನಿಯರು ಹಾಗೂ ಮತ್ತೊಬ್ಬ ವ್ಯಕ್ತಿ ಅಮಾಯಕರು ಅವರನ್ನು
ಬಿಡುಗಡೆಗೊಳಿಸಬೇಕು’ ಎಂದು ಕಮಲೇಶ್ವರಿ ಆಗ್ರಹಿಸಿದ್ದಾರೆ.
ಬಜರಂಗದಳ ದುರ್ಗ ಘಟಕದ ಸಂಯೋಜಕ ರವಿ ನಿಗಮ್ ಅವರು ಸಂತ್ರಸ್ತೆಯ ಆರೋಪವನ್ನು ತಳ್ಳಿಹಾಕಿದ್ದು, ನಾವು ಯಾರ ಮೇಲೂ ಹಲ್ಲೆ ನಡೆಸಿ, ಬಲವಂತ ಮಾಡಿಲ್ಲ. ರೈಲ್ವೆ ನಿಲ್ದಾಣದಲ್ಲಿರುವ ಸಿಸಿಟಿವಿ ಪರಿಶೀಲಿಸಿದರೆ, ಸತ್ಯ ಹೊರಬರುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.