
ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಸ್ತಿ 10 ವರ್ಷದಲ್ಲಿ ಶೇ 86ರಷ್ಟು ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆಸ್ತಿ ಶೇ 117ರಷ್ಟು ಏರಿಕೆಯಾಗಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ ವರದಿ ಇದನ್ನು ಪ್ರಕಟಿಸಿವೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರಗಳ ದತ್ತಾಂಶವನ್ನೇ ಮಾಹಿತಿ ಮೂಲವನ್ನಾಗಿ ಪರಿಗಣಿಸಿ ವಿಶ್ಲೇಷಣೆ ಮಾಡಲಾಗಿದೆ.
2014ರಲ್ಲಿ ₹ 1.65 ಕೋಟಿ ಇದ್ದ ಪ್ರಧಾನಿ ನರೇಂದ್ರ ಮೋದಿಯವರ ಒಟ್ಟು ಆಸ್ತಿ 2024ಕ್ಕೆ ₹ 3.02 ಕೋಟಿಗೆ ಏರಿಕೆಯಾಗಿದೆ. ₹ 2019ರಲ್ಲಿ ಅವರ ಆಸ್ತಿ ₹ 2.51 ಕೋಟಿ ಇತ್ತು.
ಪ್ರಧಾನಿ ಮೋದಿಯವರ ಅಫಿಡವಿಟ್ ಪ್ರಕಾರ ಅವರ ಬಳಿ ಯಾವುದೇ ಸ್ಥಿರಾಸ್ಥಿ ಅಥವಾ ಸ್ವಂತ ವಾಹನಗಳು ಇಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ₹ 2.86 ಕೋಟಿ ಠೇವಣಿ ಹಾಗೂ ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ ₹ 9 ಲಕ್ಷ ಇದೆ. ₹ 2.7 ಲಕ್ಷ ಮೌಲ್ಯದ ಚಿನ್ನದ ಉಂಗುರಗಳಿವೆ. ಅವರ ಷೇರುಗಳಲ್ಲಿ, ಮ್ಯೂಚುವಲ್ ಫಂಡ್‌ಗಳಲ್ಲಿ ಅಥವಾ ಬಾಂಡ್‌ಗಳಲ್ಲಿ ಯಾವುದೇ ಹೂಡಿಕೆ ಇಲ್ಲ.
ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಪ್ರಧಾನಿ ಮೋದಿ ಅವರ ಆಸ್ತಿಯು 10 ವರ್ಷಗಳಲ್ಲಿ ₹1.26 ಕೋಟಿಯಷ್ಟು ಹೆಚ್ಚಳವಾಗಿದೆ. ಶೇಕಡವಾರು ಲೆಕ್ಕಾಚಾರದಲ್ಲಿ ಶೇ 82ರಷ್ಟು ಜಾಸ್ತಿಯಾಗಿದೆ.
ಕಳೆದ ಚುನಾವಣೆಯಲ್ಲಿ ಉತ್ತರಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಮುಖಂಡ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆಸ್ತಿ 10 ವರ್ಷಗಳಲ್ಲಿ ₹10.99 ಕೋಟಿಯಷ್ಟು ಜಾಸ್ತಿಯಾಗಿದೆ. ಶೇಕಡವಾರು ಲೆಕ್ಕದಲ್ಲಿ 117ರಷ್ಟು ಹೆಚ್ಚಾಗಿದೆ.
2014ರಲ್ಲಿ ಅವರ ಆಸ್ತಿ ₹ 9.40 ಕೋಟಿ, 2019ರಲ್ಲಿ ₹ 15.88 ಕೋಟಿ ಇದ್ದರೆ 2024ರಲ್ಲಿ ಅವರ ಆಸ್ತಿ ₹ 20.39 ಕೋಟಿ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.