'ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೇಹ್‌ನಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ಕುರಿತು ಯಾವುದೇ ಸಂದೇಹ ಬೇಡ' ಎಂದು ರಕ್ಷಣಾ ಇಲಾಖೆಶನಿವಾರ ಸ್ಪಷ್ಟನೆ ನೀಡಿದೆ.
'ಸಮಾಜದ ಕೆಲ ವಲಯಗಳಲ್ಲಿ ಈ ಕುರಿತು ಸಂದೇಹ ವ್ಯಕ್ತವಾಗಿತ್ತು. ಇಂಥ ಸಂದೇಹಗಳು ಆಧಾರರಹಿತ. ಲೇಹ್ ಭೇಟಿಯ ಪ್ರಧಾನಿ ನರೇಂದ್ರ ಮೋದಿ ಚೀನಾ ಸೈನಿಕರೊಂದಿಗೆ ಹೋರಾಡಿ, ಗಾಯಗೊಂಡ ಯೋಧರ ಯೋಗಕ್ಷೇಮ ವಿಚಾರಿಸಿದರು' ಎಂದು ರಕ್ಷಣಾ ಇಲಾಖೆ ಹೇಳಿದೆ.
ಸೈನಿಕರೊಂದಿಗೆ ಮೋದಿ ಸಂವಾದದ ಚಿತ್ರಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದ ಹಲವರು ಸಂದೇಹ ವ್ಯಕ್ತಪಡಿಸುವ ಒಕ್ಕಣೆ ಬರೆದಿದ್ದರು. 'ಗಾಯಾಳು ಯೋಧರು ಎನ್ನುತ್ತಾರೆ, ಬ್ಯಾಂಡೇಜ್ ಏಕಿಲ್ಲ? ಯೋಧರನ್ನು ಕ್ಲಿಷ್ಟಕರ ಆಸನದಲ್ಲಿ ಕೂರಿಸಲಾಗಿದೆ. ಗಾಯಾಳುಗಳಿಗೆ ಹೀಗೆ ಕೂರಲು ಸಾಧ್ಯವೇ?' ಎಂದು ಪ್ರಶ್ನಿಸಿದ್ದರು.
ಸ್ಪಷ್ಟನೆಯ ಮೂಲಕ ಈ ಸಂದೇಹಗಳಿಗೆ ತೆರೆ ಎಳೆದಿರುವ ರಕ್ಷಣಾ ಇಲಾಖೆ, 'ಸೈನಿಕರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗಿದೆ. ವಿಪ್ಲವ ಪರಿಸ್ಥಿತಿ ನಿರ್ವಹಿಸಲೆಂದು, ಲೇಹ್ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 100 ಬೆಡ್‌ಗಳನ್ನು ಹಾಕಲಾಗಿದೆ. ಇದು ಲೇಹ್ ಜನರಲ್ ಆಸ್ಪತ್ರೆ ಸಂಕೀರ್ಣದ ಭಾಗವೇ ಆಗಿದೆ' ಎಂದು ಸ್ಪಷ್ಟಪಡಿಸಿದೆ.
'ಕೋವಿಡ್-19 ಶಿಷ್ಟಾಚಾರದಿಂದಾಗಿ ಲೇಹ್ ಆಸ್ಪತ್ರೆಯ ಕೆಲ ವಾರ್ಡ್‌ಗಳನ್ನು ಐಸೋಲೇಷನ್ ಅಗತ್ಯಗಳಿಗೆ ತಕ್ಕಂತೆ ಮಾರ್ಪಡಿಸಲಾಗಿದೆ. ಹೀಗಾಗಿ ಅಲ್ಲಿನ ಸಭಾಭವನವನ್ನು ಸೈನಿಕರಿಗೆ ಚಿಕಿತ್ಸೆ ನೀಡಲು ಬಳಸಲಾಗಿದೆ. ಸೇನಾ ಮುಖ್ಯಸ್ಥರಾದ ಜನರಲ್ ಎಂ.ಎಂ.ನರವಾಣೆ ಮತ್ತು ಇತರ ಕಮಾಂಡರ್‌ಗಳು ಸಹ ಇದೇ ಸ್ಥಳದಲ್ಲಿ ಗಾಯಾಳು ಯೋಧರ ಆರೋಗ್ಯ ವಿಚಾರಿಸಿದ್ದರು' ಎಂದು ರಕ್ಷಣಾ ಇಲಾಖೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.