ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಉತ್ತಮ ಮಾರ್ಗದರ್ಶಕರಾಗಿದ್ದಾರೆ. ಅವರು (ಮೋದಿ) ಜನರಲ್ಲಿ ‘ದೇಶ ಮೊದಲು’ ಎಂಬ ಮನೋಭಾವವನ್ನು ಮೂಡಿಸಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಬಣ್ಣಿಸಿದ್ದಾರೆ.
ಗುರು ಪೂರ್ಣಿಮೆಯ ಪ್ರಯುಕ್ತ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ) ವತಿಯಿಂದ ದಕ್ಷಿಣ ದೆಹಲಿಯ ಅಧ್ಚಿನಿ ಗ್ರಾಮದಲ್ಲಿ ನಿರ್ಮಿಸಿರುವ ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದ್ದಾರೆ.
‘ಗುರು ಪೂರ್ಣಿಮೆ ದಿನವಾದ ಇಂದು ನಾನು ಪ್ರಧಾನಿ ಮೋದಿಯವರನ್ನು ಉತ್ತಮ ಬೋಧನೆಗಳಿಗಾಗಿ ಸ್ಮರಿಸುತ್ತಿದ್ದೇನೆ. ನಾನು ಅವರನ್ನು ಗುರು ಎಂದು ಗೌರವಿಸುತ್ತೇನೆ. ಕಳೆದೊಂದು ವಾರದಲ್ಲಿ ಐದು ರಾಷ್ಟ್ರಗಳ ಯಶಸ್ವಿ ಪ್ರವಾಸಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಅವರು (ಮೋದಿ) ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಯಶಸ್ಸನ್ನು ತಂದುಕೊಟ್ಟಿದ್ದಾರೆ’ ಎಂದು ಅವರು ಹೇಳಿದ್ದಾರೆ.
‘ಮೋದಿ ಅವರು ವಿದೇಶಿ ಪ್ರವಾಸದ ವೇಳೆ ಐದು ದೇಶಗಳ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಮಗೆ ‘ದೇಶ ಮೊದಲು’ ಎಂಬ ಮನೋಭಾವವನ್ನು ಮೂಡಿಸುವ ಮೂಲಕ ಕಠಿಣ ಪರಿಶ್ರಮ ಮತ್ತು ಹೊಸ ದೃಷ್ಟಿಕೋನದೊಂದಿಗೆ ಕೆಲಸ ಮಾಡಬೇಕೆಂದು ನಿರ್ದೇಶನ ನೀಡಿದ್ದಾರೆ’ ಎಂದು ಗುಪ್ತಾ ತಿಳಿಸಿದ್ದಾರೆ.
ನಮೀಬಿಯಾ ರಾಜಧಾನಿ ವಿಂಡ್‌ಹೋಕ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧ್ಯಕ್ಷೆ ನೆತುಂಬೊ ನಾಂಡಿ–ದೇತ್ವ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಆರ್ಡರ್ ಆಫ್ ದಿ ಮೋಸ್ಟ್ ಎನ್ಸಿಯಂಟ್ ವೆಲ್‌ವಿಚಿಯಾ ಮಿರಾಬಿಲಿಸ್’ ಪ್ರದಾನ ಮಾಡಿದ್ದರು. 2014 ರ ಮೇ ತಿಂಗಳಲ್ಲಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೋದಿ ಅವರು ಪಡೆದ 27ನೇ ಅಂತರರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.