ಪ್ರಧಾನಿ ನರೇಂದ್ರ ಮೋದಿ
ಪಟ್ನಾ: ‘ಕಾಂಗ್ರೆಸ್‌ನ ‘ಮತದಾರರ ಅಧಿಕಾರ ಯಾತ್ರೆ’ಯ ವೇಳೆ ನನ್ನ ತಾಯಿಯನ್ನು ನಿಂದಿಸಿರುವುದು ನನಗೆ ತೀವ್ರ ನೋವು ತರಿಸಿದೆ. ಆರ್‌ಜೆಡಿ ಮತ್ತು ಕಾಂಗ್ರೆಸ್ ಅನ್ನು ನಾನು ಕ್ಷಮಿಸಬಹುದು. ಆದರೆ, ಬಿಹಾರದ ಜನರು ಕ್ಷಮಿಸುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.
‘ಭಾರತಮಾತೆಯನ್ನೇ ನಿಂದಿಸುವವರಿಗೆ ನನ್ನ ತಾಯಿಯನ್ನು ನಿಂದಿಸುವುದು ಏನೂ ಅಲ್ಲ. ಭಾರತಮಾತೆಯನ್ನು ನಿಂದಿಸುವವರಿಗೆ ಶಿಕ್ಷೆಯಾಗಬೇಕು’ ಎಂದರು. ದರ್ಭಂಗಾದಲ್ಲಿ ನಡೆದ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರನ್ನು ನಿಂದಿಸಲಾಗಿದೆ ಎಂದು ವಿವಾದ ಎದ್ದಿತ್ತು. ಈ ಬಗ್ಗೆ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರು ಪ್ರತಿಕ್ರಿಯಿಸಿದರು.
‘ರಾಜಕೀಯಕ್ಕೂ ನನ್ನ ತಾಯಿಗೂ ಏನೂ ಸಂಬಂಧವಿಲ್ಲ. ಆಕೆಯ ತಪ್ಪೇನು; ಆಕೆಯನ್ನು ಯಾಕಾಗಿ ನಿಂದಿಸಲಾಯಿತು. ಮಹಿಳೆಯರು ಅಶಕ್ತರು ಎನ್ನುವ ಮನಃಸ್ಥಿತಿ ಇರುವವರೇ ತಾಯಿಯಂದಿರನ್ನು ನಿಂದಿಸುತ್ತಾರೆ. ನಾನು ನನ್ನ ತಾಯಿಯ ಮಗ. ನಾನು ನಿಮ್ಮೊಂದಿಗೆ ನನ್ನ ನೋವನ್ನು ಹಂಚಿಕೊಳ್ಳುತ್ತಿದ್ದೇನೆ’ ಎಂದು ಹೇಳಿ ಗದ್ಗದಿತರಾದರು.
‘ನನಗೆ ಜೀವ ನೀಡಿದ ತಾಯಿ, ತಾಯಿನೆಲಕ್ಕಾಗಿ ಸೇವೆ ಮಾಡಲು ಹೇಳಿದ್ದಾರೆ. ನಾನು ಇದನ್ನೇ ಮಾಡುತ್ತಿದ್ದೇನೆ. ನನ್ನ ತಾಯಿ ಆಕೆಗಾಗಿ ಎಂದಿಗೂ ಒಂದು ಸೀರೆಯನ್ನೂ ಖರೀದಿಸಿದವಳಲ್ಲ. ನಮಗಾಗಿ ಹಣವನ್ನು ಕೂಡಿಡುತ್ತಿದ್ದಳು. ಇದು ಸೀತಾ ಮಾತೆಯ ಭೂಮಿ. ಈ ಭೂಮಿ ಯಾವತ್ತಿಗೂ ಮಹಿಳೆಯರಿಗೆ ಗೌರವ ನೀಡುತ್ತಲೇ ಬಂದಿದೆ. ನನ್ನ ತಾಯಿಯನ್ನು ನಿಂದಿಸಲಾಗಿದೆ. ನಾನು ಇದನ್ನು ನಿರೀಕ್ಷಿಸಿರಲಿಲ್ಲ. ನನ್ನ ತಾಯಿಯನ್ನು ನಿಂದಿಸಿದ್ದು ಕೋಟಿ ಕೋಟಿ ಸಹೋದರಿಯರನ್ನು, ಹೆಣ್ಣುಮಕ್ಕಳನ್ನು ನಿಂದಿಸಿದಂತಾಗಿದೆ’ ಎಂದರು.
‘ಆರ್‌ಜೆಡಿ ಮತ್ತು ಕಾಂಗ್ರೆಸ್ ನಾಯಕರಿಂದ ಬಿಹಾರದ ಜನರು ಬೀದಿ ಬೀದಿಗಳಲ್ಲಿ ಉತ್ತರ ಕೇಳಬೇಕು. ‘ನಾವು ಒಬ್ಬ ತಾಯಿಯ ಅವಮಾನವನ್ನು ಸಹಿಸುವುದಿಲ್ಲ. ಆರ್‌ಜೆಡಿಯ ದೌರ್ಜನ್ಯ ಮತ್ತು ಕಾಂಗ್ರೆಸ್‌ನ ದಾಳಿಯನ್ನು ನಾವು ಸಹಿಸುವುದಿಲ್ಲ’ ಎಂಬ ಮಾತುಗಳು ರಾಜ್ಯದಲ್ಲಿ ರಿಂಗಣಿಸಬೇಕು’ ಎಂದು ಕರೆ ನೀಡಿದರು.
ಲಾಲೂ ಪ್ರಸಾದ್ ಅವರ ಪಕ್ಷವು ಮಹಿಳೆಯರ ವಿರುದ್ಧ ಸೇಡು ತೀರಿಸಿಕೊಳ್ಳಬೇಕಿದೆ. ಯಾಕೆಂದರೆ ಆರ್‌ಜೆಡಿಯನ್ನು ಸೋಲಿಸಿದ್ದೇ ಮಹಿಳೆಯರುನರೇಂದ್ರ ಮೋದಿ ಪ್ರಧಾನಿ
ಮಹಿಳೆಯರಿಗೆ ಸಾಲ: ಸಹಕಾರಿ ಸಂಘ ಉದ್ಘಾಟಿಸಿದ ಪ್ರಧಾನಿ
ರಾಜ್ಯದಲ್ಲಿರುವ ಮಹಿಳಾ ಸ್ವ ಸಹಾಯ ಸಂಘಗಳಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆದುಕೊಳ್ಳಲು ಅನುಕೂಲ ಕಲ್ಪಿಸಲು ‘ಬಿಹಾರ ರಾಜ್ಯ ಜೀವಿಕಾ ನಿಧಿ ಸಾಖ್ ಸಹಕಾರಿ ಸಂಘ ಲಿಮಿಟೆಡ್’ ಎನ್ನುವ ಸಹಕಾರಿ ಸಂಘವನ್ನು ವಿಡಿಯೊ ಕಾನ್ಫರೆನ್ಸ್ ನವದೆಹಲಿಯಿಂದಲೇ ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು. ಈ ಸಂಘದ ಬ್ಯಾಂಕ್ ಖಾತೆಗೆ ₹105 ಕೋಟಿ ಹಣವನ್ನೂ ವರ್ಗಾಯಿಸಿದರು. ‘ಜೀವಿಕಾ ಯೋಜನೆ (ಬಡತನ ನಿರ್ಮೂಲನೆಯಾಗಿ ಬಿಹಾರ ಸರ್ಕಾರದ ಯೋಜನೆ) ಕ್ಲಸ್ಟರ್ ಮಟ್ಟದ ಎಲ್ಲ ಸದಸ್ಯರೂ ಈ ಸಂಘದ ಸದಸ್ಯರಾಗುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರವು ಈ ಸಂಘಕ್ಕೆ ಹಣ ವರ್ಗಾಯಿಸುತ್ತವೆ. ಬಿಹಾರದಲ್ಲಿರುವ ಎನ್‌ಡಿಎ ಸರ್ಕಾರವು ಯಾವಾಗಲೂ ಮಹಿಳೆಯ ಸಬಲೀಕರಣಕ್ಕೆ ಕೆಲಸ ಮಾಡುತ್ತದೆ’ ಎಂದು ಪ್ರಧಾನಿ ಮೋದಿ ತಿಳಿಸಿದರು.
‘ಭಾರತದಲ್ಲಿ ತಯಾರಿಸಿದ ಸಣ್ಣದಾದ ಚಿಪ್ ಜಗತ್ತಿನಲ್ಲಿ ಬಹುದೊಡ್ಡ ಬದಲಾವಣೆಯನ್ನು ತರುವ ಕಾಲ ದೂರವಿಲ್ಲ’ ಎಂದು ಪ್ರಧಾನಿ ಮೋದಿ ಹೇಳಿದರು. ‘ಸೆಮಿಕಾನ್ ಇಂಡಿಯಾ–2025’ ಸಮಾವೇಶವನ್ನು ಉದ್ಘಾಟಿಸಿ ಪ್ರಧಾನಿ ಮೋದಿ ಮಾತನಾಡಿದರು. 18 ಬಿಲಿಯನ್ ಡಾಲರ್‌ನಷ್ಟು (ಸುಮಾರು ₹1.58 ಲಕ್ಷ ಕೋಟಿ) ಮೊತ್ತದ 10 ಸೆಮಿಕಂಡಕ್ಟರ್ ಯೋಜನೆಗಳು ದೇಶಕ್ಕೆ ಬರುವ ಕಾಲ ಸನ್ನಿಹಿತವಾಗಿದೆ. ಭಾರತವು ಸೆಮಿಕಂಡಕ್ಟರ್ ಮಿಷನ್‌ನ ಮುಂದಿನ ಹಂತವನ್ನು ಪ್ರವೇಶಿಸಿದರೆ ನಮ್ಮ ಚಿಪ್ ಮಾರುಕಟ್ಟೆಯು 1 ಟ್ರಿಲಿಯನ್ ಡಾಲರ್‌ನಷ್ಟಾಗಲಿದೆ (ಸುಮಾರು ₹88 ಲಕ್ಷ ಕೋಟಿ)’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.