ADVERTISEMENT

ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದೆಲ್ಲೆಡೆ ರೈತರ ಆಕ್ರೋಶ

ಕೇಂದ್ರದ ವಿರುದ್ಧದ ಪ್ರತಿಭಟನೆಗೆ 10 ತಿಂಗಳು l ಕೆಲವು ರಾಜ್ಯಗಳು ಬಂದ್‌ l ಹಲವೆಡೆ ಪ್ರತಿಭಟನೆ

ಪಿಟಿಐ
Published 27 ಸೆಪ್ಟೆಂಬರ್ 2021, 20:12 IST
Last Updated 27 ಸೆಪ್ಟೆಂಬರ್ 2021, 20:12 IST
ರೈತರ ಪ್ರತಿಭಟನೆ
ರೈತರ ಪ್ರತಿಭಟನೆ    

ನವದೆಹಲಿ/ಚಂಡೀಗಡ: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ನೀಡಿದ ಬಂದ್‌ ಕರೆಯಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಜನಜೀವನ ಅಸ್ತವ್ಯಸ್ತಗೊಂಡಿದೆ. ದೆಹಲಿಯನ್ನು ಸುತ್ತಲಿನ ರಾಜ್ಯಗಳ ಜತೆಗೆ ಸಂಪರ್ಕಿಸುವ ಹೆದ್ದಾರಿಗಳಲ್ಲಿ ಭಾರಿ ವಾಹನ ದಟ್ಟಣೆ ಕಂಡು ಬಂತು.

ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಭಾರತ್‌ ಬಂದ್‌ಗೆ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸಂಚಾರವನ್ನು ತಡೆಯಲಾಗಿದೆ.ಉತ್ತರ ಭಾರತದ ಹಲವೆಡೆ ರೈಲು ಸಂಚಾರಕ್ಕೂ ಅಡ್ಡಿ ಉಂಟಾಗಿತ್ತು. 25ಕ್ಕೂ ಹೆಚ್ಚು ರೈಲುಗಳನ್ನು ರದ್ದುಪಡಿಸಲಾಗಿತ್ತು ಎಂದು ಭಾರತೀಯ ರೈಲ್ವೆ ಹೇಳಿದೆ.

ರೈತರು ತಮ್ಮ ಟ್ರ್ಯಾಕ್ಟರ್‌ಗಳನ್ನೇ ರಸ್ತೆಗೆ ಅಡ್ಡವಾಗಿ ಇರಿಸಿ ರಸ್ತೆ ತಡೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧದ ಘೋಷಣೆ ಹಲವು ರಾಜ್ಯಗಳಲ್ಲಿ ಮೊಳಗಿದೆ.ಯಾವುದೇ ಸಂಘರ್ಷಎಲ್ಲಿಯೂ ನಡೆದಿಲ್ಲ. ಪ್ರತಿಭಟನೆಯು ಶಾಂತಿಯುವಾಗಿಯೇ ಮುಗಿಯಿತು.ಕೇರಳ, ಬಿಹಾರ, ಜಾರ್ಖಂಡ್‌, ಪಶ್ಚಿಮ ಬಂಗಾಳ ಮತ್ತು ಒಡಿಶಾದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ತೀವ್ರವಾಗಿತ್ತು.

ADVERTISEMENT

ಜಮ್ಮುವಿನಲ್ಲಿಯೂ ಪ್ರತಿಭಟನೆ ನಡೆದಿದೆ. ರಾಜಸ್ಥಾನದ ಹಲವೆಡೆ ಬಂದ್‌ ಪರಿಣಾಮ ಕಾಣಿಸಿದೆ.ಕಾಂಗ್ರೆಸ್‌, ಎಡಪಕ್ಷಗಳು ಮತ್ತು ಟಿಡಿಪಿಯ ಕಾರ್ಯಕರ್ತರು ತೆಲಂಗಾಣದ ವಿವಿಧೆಡೆ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಆಂಧ್ರ ಪ್ರದೇಶದಲ್ಲಿ ಸರ್ಕಾರವೇ ಬಂದ್‌ಗೆ ಬೆಂಬಲ ಘೋಷಿಸಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಬಂದ್‌ ನಡೆದಿಲ್ಲ. ಆದರೆ, ಹಲವೆಡೆ ರೈತರು ಪ್ರತಿಭಟನೆ ದಾಖಲಿಸಿದ್ದಾರೆ. ರಸ್ತೆ ತಡೆ ನಡೆಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಸೂರತ್‌–ಮುಂಬೈ ಹೆದ್ದಾರಿ, ಅಹಮದಾಬಾದ್‌–ರಾಜಕೋಟ್‌ ಹೆದ್ದಾರಿಯಲ್ಲಿಯೂ ರೈತರು ಪ್ರತಿಭಟನೆ ನಡೆಸಿದರು.

ಸಂಯುಕ್ತ ಕಿಸಾನ್‌ ಮೋರ್ಚಾ ನೇತೃತ್ವದಲ್ಲಿ ರೈತರ 40 ಸಂಘಟನೆಗಳು ಕೃಷಿ ಕಾಯ್ದೆಗಳ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗೆ 10 ತಿಂಗಳು ತುಂಬಿದ ಸಂದರ್ಭದಲ್ಲಿ ಭಾರತ ಬಂದ್‌ಗೆ ಕರೆ ನೀಡಲಾಗಿತ್ತು. ರೈತರ ಸಂಘಟನೆಗಳು ಮತ್ತು ಸರ್ಕಾರದ ನಡುವೆ ಈವರೆಗೆ 11 ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ, ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಜನವರಿ 22ರ ನಂತರ ಮಾತುಕತೆ ನಡೆದಿಲ್ಲ. ಜನವರಿ 26ರಂದು ರೈತರು ನಡೆಸಿದ ಟ್ರ್ಯಾಕ್ಟರ್‌ ರ‍್ಯಾಲಿ ಸಂದರ್ಭದಲ್ಲಿ ವ್ಯಾಪಕ ಹಿಂಸಾಚಾರವೂ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.