ಹೈದರಾಬಾದ್: ನ್ಯಾಷನಲ್ ಹೆರಾಲ್ಡ್‌ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರ ಹೆಸರಿದೆ ಎಂದು ವರದಿಗಳು ತಿಳಿಸಿವೆ. ಇದು, ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ರೇವಂತ ರೆಡ್ಡಿ ಅವರು ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದಾಗ ‘ಯಂಗ್ ಇಂಡಿಯನ್’ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಹಣ ಕ್ರೋಡೀಕರಿಸಲು ಒತ್ತು ನೀಡಿದ್ದರು ಎಂದು ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರು, ‘ರೇವಂತ ರೆಡ್ಡಿ ಅವರು ತೆಲಂಗಾಣವನ್ನು ಕಾಂಗ್ರೆಸ್ ಪಕ್ಷದ ಎ.ಟಿ.ಎಂ ಆಗಿ ಪರಿವರ್ತಿಸಿದ್ದಾರೆ’ ಎಂದು ಕಟುವಾಗಿ ಟೀಕಿಸಿದ್ದಾರೆ.
ಭ್ರಷ್ಟಾಚಾರದ ವಿಷಯದಲ್ಲಿ ತೆಲಂಗಾಣ ಸರ್ಕಾರ ರಾಜಿಯಾಗಿದೆ ಎಂದು ಬಿಆರ್‌ಎಸ್ ಹಲವು ತಿಂಗಳಿಂದ ಮಾಡುತ್ತಿದ್ದ ಆರೋಪ ಈಗಿನ ವರದಿಗಳಿಂದ ಸಾಬೀತಾಗಿದೆ ಎಂದೂ ಹೇಳಿದರು.
ಯಂಗ್ ಇಂಡಿಯನ್‌ಗೆ 2019ರಿಂದ 2022ರ ಅವಧಿಯಲ್ಲಿ ದೇಣಿಗೆ ಹರಿದುಬರುವಂತೆ ಕ್ರಮವಹಿಸಿದ್ದ ಕಾಂಗ್ರೆಸ್ ನಾಯಕರ ಹೆಸರನ್ನು ಇ.ಡಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ ಎಂದು ವರದಿಗಳು ತಿಳಿಸಿವೆ.
‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಬಗ್ಗೆ ಮೌನವಹಿಸಬಾರದು. ಆರೋಪಪಟ್ಟಿಯಲ್ಲಿ ರೇವಂತ ರೆಡ್ಡಿ ಹೆಸರಿರುವ ಕಾರಣ ಈಗ ಕ್ರಮ ಜರುಗಿಸುವುದೇ ಅಥವಾ ಹಿಂದಿನ ಹಲವು ಹಗರಣಗಳಲ್ಲಿ ರಕ್ಷಿಸಿದಂತೆ ಈಗಲೂ ರಕ್ಷಣೆ ಮಾಡುವುದೇ’ ಎಂದು ಕೆ.ಟಿ.ರಾಮರಾವ್ ಅವರು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.