ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್‌ನ ಯಾವುದೇ ‘ದೊಡ್ಡ ನಾಯಕ’ರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿರುವ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ‘ಒಳ ಒಪ್ಪಂದ’ ಆಗಿದೆ ಎಂದು ಆರೋಪಿಸಿದ್ದಾರೆ.
ಗುರುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಶಾಸಕರು ಮತ್ತು ಮುಖಂಡರನ್ನುದ್ದೇಶಿಸಿ ಮಾತನಾಡಿದ ಅವರು, ‘ಕೆಲವೊಂದು ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳಿ ಎಂಬ ಆಫರ್ ನಿರಂತರವಾಗಿ ನಮಗೆ ಬರುತ್ತಿದೆ. ಕಾಂಗ್ರೆಸ್ ಪಕ್ಷವು ಈಗ ಬಿಜೆಪಿಯೊಂದಿಗೆ ರಾಜಿ ಮಾಡಿಕೊಂಡಿರುವುದನ್ನು ಜನರು ನೋಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣವು ಈಗ ಮುಚ್ಚಿ ಹೋಗಿದೆ. ಆದರೆ, ಕಾಂಗ್ರೆಸ್‌ನ ಯಾವುದೇ ದೊಡ್ಡ ನಾಯಕ ಜೈಲಿಗೆ ಹೋಗಿಲ್ಲ. ನಮ್ಮ ಐವರು ಪ್ರಮುಖ ನಾಯಕರನ್ನು ನಕಲಿ ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಲಾಗಿದೆ’ ಎಂದು ವಾಗ್ದಾಳಿ ನಡೆಸಿದರು.
‘2ಜಿ ಹಗರಣ ಮತ್ತು ಕಲ್ಲಿದ್ದಲು ಹಗರಣಗಳನ್ನು ಮುಚ್ಚಿಹಾಕಲಾಯಿತು. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನಂಟಿನ ಬಗ್ಗೆ ಜನರು ಕೂಡ ಮಾತನಾಡುತ್ತಿದ್ದಾರೆ. ನಾವು ರಾಜಕೀಯಕ್ಕೆ ಬಂದಿರುವುದು ದೇಶದ ಮೇಲಿನ ಪ್ರೀತಿಗಾಗಿಯೇ ಹೊರತು ರಾಜಿ ಮಾಡಿಕೊಳ್ಳಲು ಅಲ್ಲ. ರಾಷ್ಟ್ರದ ಹಿತಾಸಕ್ತಿಗಾಗಿ ಹೋರಾಡುತ್ತಲೇ ಇರುತ್ತೇವೆ. ಪಕ್ಷ, ಅಧಿಕಾರ, ನಿಮಗಾಗಿ ಅಥವಾ ನಿಮ್ಮ ಕುಟುಂಬದ ಹಿತದೃಷ್ಟಿಯಿಂದ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.