ಲಖನೌ: ‘ಪ್ರಕೃತಿಯು ಯಾರಿಗೂ ಅನ್ಯಾಯ ಮಾಡುವುದಿಲ್ಲ ಮತ್ತು ಯಾರಿಗೂ ಅನ್ಯಾಯವಾಗುವುದನ್ನು ಸಹಿಸಿಕೊಳ್ಳುವುದೂ ಇಲ್ಲ. ಆದರೆ, ಅದು ಎಲ್ಲರ ಲೆಕ್ಕವನ್ನು ಚುಕ್ತಾ ಮಾಡುತ್ತದೆ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಂಗಳವಾರ ಹೇಳಿದರು. ಕಳೆದ ತಿಂಗಳು ಹತ್ಯೆಯಾದ ಅಶ್ರಫ್ ಹಾಗೂ ಅತೀಕ್ ಸಹೋದರರನ್ನು ಉಲ್ಲೇಖಿಸಿ ಯೋಗಿ ಅವರು ಈ ಮಾತುಗಳನ್ನು ಆಡಿದ್ದಾರೆ.
ಕ್ಯಾಮೆರಾಗಳ ಎದುರೇ ಸಹೋದರರ ಹತ್ಯೆ ನಡೆದ ಬಳಿಕ, ಉತ್ತರ ಪ್ರದೇಶದ ಸಚಿವ ಸುರೇಶ್ ಖನ್ನಾ ಅವರು ‘ಪವಿತ್ರ ನ್ಯಾಯ’ವಾಗಿದೆ ಎಂದು ಹೇಳಿದ್ದರು. ಈಗ ಸ್ವತಃ ಮುಖ್ಯಮಂತ್ರಿ ಅವರೇ ಹತ್ಯೆಯನ್ನು ‘ಪ್ರಕೃತಿಯು ಎಲ್ಲರ ಲೆಕ್ಕವನ್ನು ಚುಕ್ತ ಮಾಡುತ್ತದೆ’ ಎಂದು ಬಣ್ಣಿಸಿದ್ದಾರೆ.
ಪ್ರಯಾಗರಾಜ್‌ನಲ್ಲಿ ನಡೆದ ಸಾರ್ವಜನಿಕ ರ್‍ಯಾಲಿವೊಂದರಲ್ಲಿ ಮಾತನಾಡಿದ ಅವರು, ‘ರಾಮ ಮಾನಸ ಚರಿತ’ ಕಾವ್ಯದ ಪದ್ಯವೊಂದನ್ನು ಉಲ್ಲೇಖಿಸಿ, ‘ಕರ್ಮವು ಎಲ್ಲರ ಜೀವನದಲ್ಲಿ ಪ್ರಮುಖವಾದ ಅಂಶ. ನಮ್ಮ ಪಾಪಗಳಿಗೆ ಬೆಲೆ ತೆರಲೇಬೇಕು’ ಎಂದರು.
‘ಮಾಫಿಯಾದವರ ಹಿಡಿತದಲ್ಲಿರುವ ಭೂಮಿಯನ್ನು ಕಸಿದುಕೊಂಡು ಅದೇ ಜಾಗದಲ್ಲಿ ಬಡವರಿಗೆ ಮನೆ ನಿರ್ಮಿಸುವ ಕಾರ್ಯವನ್ನು ಮುಂದುವರಿಸುತ್ತೇವೆ. ನಮ್ಮ ಸರ್ಕಾರವು ಓಲೈಕೆ ರಾಜಕಾರಣವನ್ನು ಮಾಡುವುದಿಲ್ಲ. ಸಮಾಜದ ಎಲ್ಲ ವರ್ಗದ ಜನರಿಗಾಗಿ ಕೆಲಸ ಮಾಡುತ್ತದೆ. ಸ್ವಜನ ಪಕ್ಷಪಾತ, ಜಾತಿವಾದ ಮತ್ತು ಕುಟುಂಬ ರಾಜಕಾರಣಕ್ಕೆ ನಮ್ಮ ಸರ್ಕಾರದಲ್ಲಿ ಸ್ಥಾನವಿಲ್ಲ’ ಎಂದರು.
‘ರಾಜ್ಯದಲ್ಲಿ ಮಾಫಿಯಾದವರು ಇನ್ನು ಮುಂದೆ ಜನರನ್ನು ‘ಭಯ’ಪಡಿಸಲು ಸಾಧ್ಯವಿಲ್ಲ. ಹಿಂದೆ ರಾಜ್ಯವು ಕೋಮುಗಲಭೆಗೆ ಹೆಸರಾಗಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ’ ಎಂದು ಮುಖ್ಯಮಂತ್ರಿ ಯೋಗಿ ಅವರು ಈ ಹಿಂದೆ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.