ನವಜೋತ್ ಸಿಂಗ್ ಸಿಧು ಹಾಗೂ ನವಜೋತ್ ಕೌರ್
– ಪಿಟಿಐ
ಚಂಡೀಗಢ: ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದರೆ ಸಕ್ರಿಯ ರಾಜಕಾರಣಕ್ಕೆ ಮರಳುತ್ತಾರೆ ಎಂದು ಅವರ ಪತ್ನಿಯೂ ಆಗಿರುವ ಪಕ್ಷದ ನಾಯಕಿ ನವಜೋತ್ ಕೌರ್ ಸಿಧು ಹೇಳಿದ್ದಾರೆ.
ಯಾವ ಪಕ್ಷಕ್ಕೂ ಕೊಡಲು ನಮ್ಮಲ್ಲಿ ಹಣ ಇಲ್ಲ. ಆದರೆ ಪಂಜಾಬ್ ಅನ್ನು ‘ಸುವರ್ಣ ರಾಜ್ಯ’ವನ್ನಾಗಿ ಪರಿವರ್ತಿಸುತ್ತೇವೆ ಎಂದು ಹೇಳಿದ್ದಾರೆ.
‘ನಾವು ಯಾವತ್ತೂ ಪಂಜಾವ್ ಹಾಗೂ ಪಂಜಾಬಿತನದ ಬಗ್ಗೆ ಮಾತನಾಡುತ್ತೇವೆ. ಆದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳಲು ₹ 500 ಕೋಟಿ ನೀಡಲು ನಮ್ಮಲ್ಲಿ ಹಣವಿಲ್ಲ’ ಎಂದು ಅವರು ಶನಿವಾರ ಮಾಧ್ಯಮದವರೊಂದಿಗೆ ಹೇಳಿದ್ದಾರೆ.
ರಾಜ್ಯದ ಕಾನೂನು ಸುವ್ಯವಸ್ಥೆ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚಿಸಲು ರಾಜ್ಯಪಾಲ ಗುಲಾಬ್ ಚಂದ್ ಕಟಿಯಾರ್ ಅವರನ್ನು ಭೇಟಿಯಾದ ಬಳಿಕ ಹೀಗೆ ಹೇಳಿದ್ದಾರೆ.
ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟಿದ್ದಾರಾ ಎನ್ನುವ ಪ್ರಶ್ನೆಗೆ ‘ಇಲ್ಲ’ ಎಂದು ಉತ್ತರಿಸಿದ ಅವರು, ‘ಯಾರಾದರೂ ₹ 500 ಕೋಟಿಯ ಸೂಟ್‌ಕೇಸ್ ಕೊಟ್ಟರೆ ಅವರು ಸಿಎಂ ಆಗುತ್ತಾರೆ’ ಎಂದು ಹೇಳಿದ್ದಾರೆ.
‘ಒಂದು ವೇಳೆ ಪಕ್ಷ ಅವರಿಗೆ ಅವಕಾಶ ನೀಡಿದರೆ ಪಂಜಾಬ್ ಅನ್ನು ಅಭಿವೃದ್ಧಿ ಪಡಿಸುತ್ತಾರೆ. ಯಾವ ಪಕ್ಷಕ್ಕೂ ಕೊಡಲು ನಮ್ಮಲ್ಲಿ ಹಣವಿಲ್ಲ. ಆದರೆ ನಾವು ಅಭಿವೃದ್ಧಿ ಪಡಿಸುತ್ತೇವೆ. ನಾವು ಪಂಜಾಬ್ ಅನ್ನು ಸುವರ್ಣ ರಾಜ್ಯವನ್ನಾಗಿ ಪರಿವರ್ತಿಸುತ್ತೇವೆ’ ಎಂದು ಹೇಳಿದ್ದಾರೆ.
‘ಪಂಜಾಬ್ ಕಾಂಗ್ರೆಸ್‌ನಲ್ಲಿ ಐದು ಮಂದಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಅವರು ಸಿಧುವನ್ನು ಮುಂದೆ ಬರಲು ಬಿಡುತ್ತಿಲ್ಲ’ ಎಂದು ಹೇಳಿದ್ದಾರೆ.
ನನ್ನ ಪತಿಗೆ ಕಾಂಗ್ರೆಸ್ ಹಾಗೂ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಗಟ್ಟಿ ಸಂಬಂಧವಿದೆ ಎಂದು ತಿಳಿಸಿದ್ದಾರೆ.
‘ಭಾರಿ ಒಳಜಗಳ ಇದ್ದು, ಈಗಾಗಲೇ ಐವರು ಆಕಾಂಕ್ಷಿಗಳು ಇರುವುದದರಿಂದ ಸಿಧುವನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಲು ಅವರು ಬಿಡುವುದಿಲ್ಲ. ಹೈಕಮಾಂಡ್‌ಗೆ ಅದು ಅರ್ಥವಾದರೆ ಬೇರೆ ವಿಷಯ’ ಎಂದಿದ್ದಾರೆ.
ಒಂದು ವೇಳೆ ಬಿಜೆಪಿ ಸಿಧುಗೆ ಅವಕಾಶ ನೀಡಿದರೆ ಮತ್ತೆ ಬಿಜೆಪಿಗೆ ಸೇರುತ್ತಾರೆಯೇ ಎನ್ನುವ ಪ್ರಶ್ನೆಗೆ, ‘ಅವರ ಪರವಾಗಿ ನಾನು ಹೇಳಿಕೆ ನೀಡುವುದಿಲ್ಲ’ ಎಂದು ಹೇಳಿದ್ದಾರೆ.
ಪಂಜಾಬ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರೂ ಆಗಿರುವ ಸಿಧು, ಪಕ್ಷದ ಯಾವುದೇ ಕಾರ್ಯಕ್ರಮಗಲ್ಲಿ ಪಾಲ್ಗೊಳ್ಳುತ್ತಿಲ್ಲ. 2024ರ ಲೋಕಸಭಾ ಚುನಾವಣೆಯಲ್ಲೂ ಪಕ್ಷದ ಪರವಾಗಿ ಪ್ರಚಾರ ಮಾಡಿರಲಿಲ್ಲ.
2024ರ ಐಪಿಎಲ್‌ನಲ್ಲಿ ಮತ್ತೆ ಕಾಮೆಂಟೇಟರ್ ಆಗಿ ಮರಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.