ADVERTISEMENT

ಪ್ರಿಯಾಂಕಾ ಗಾಂಧಿ ವಾದ್ರಾ ಬಂಧನ ಕಾನೂನುಬಾಹಿರ: ನವಜೋತ್‌ ಸಿಂಗ್ ಸಿಧು ವಾಗ್ದಾಳಿ

ಪಿಟಿಐ
Published 6 ಅಕ್ಟೋಬರ್ 2021, 8:20 IST
Last Updated 6 ಅಕ್ಟೋಬರ್ 2021, 8:20 IST
ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು   

ಚಂಡೀಗಡ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವ ಉತ್ತರ ಪ್ರದೇಶದ ಪೊಲೀಸರ ವಿರುದ್ಧ ಹರಿಹಾಯ್ದಿರುವ ಪಂಜಾಬ್‌ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್‌ ಸಿಂಗ್ ಸಿಧು, ‘ಇದು ಸಂವಿಧಾನಬಾಹಿರ ಕ್ರಮ‘ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಪ್ರಿಯಾಂಕಾ ಅವರನ್ನು ಬಂಧಿಸಿ 54 ಗಂಟೆಗಳು ಕಳೆದರೂ, ಇನ್ನೂ ಯಾವುದೇ ನ್ಯಾಯಾಲಯದ ಎದುರು ಹಾಜರುಪಡಿಸಿಲ್ಲ. ವ್ಯಕ್ತಿಯನ್ನು ಬಂಧಿಸಿದ 24 ಗಂಟೆಗೆಯೊಳಗೆ ನ್ಯಾಯಾಲಯಕ್ಕೆ ಹಾಜರಪಡಿಸದಿರುವುದು ಕಾನೂನುಬಾಹಿರವಾಗಿದ್ದು, ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಬಿಜೆಪಿ ಮತ್ತು ಉತ್ತರ ಪ್ರದೇಶ ಪೊಲೀಸರು ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಮೂಲಭೂತ ಮಾನವ ಹಕ್ಕುಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ‘ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಸಾವಿಗೆ ಕಾರಣರಾದ ಸಚಿವ ಅಜಯ್ ಮಿಶ್ರಾ ಅವರ ಪುತ್ರನನ್ನು ಬಂಧಿಸಬೇಕು ಹಾಗೂ ಬಂಧಿತ ಪ್ರಿಯಾಂಕಾ ಅವರನ್ನು ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ಪಂಜಾಬ್‌ನ ಪಕ್ಷದ ಕಾರ್ಯಕರ್ತರು ಲಖಿಂಪುರ ಖೇರಿಗೆ ಜಾಥಾ ನಡೆಸುವರು ಎಂದು ಎಚ್ಚರಿಸಿದ ಮರುದಿನ ಅವರು ಈ ಟ್ವೀಟ್ ಮಾಡಿದ್ದಾರೆ.

ADVERTISEMENT

ಲಖಿಂಪುರ ಖೇರಿಯತ್ತ ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸಲು ಸೋಮವಾರ ಸೀತಾಪುರದ ಬಳಿ ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.