ADVERTISEMENT

ಪಹಲ್ಗಾಮ್ ಭಯೋತ್ಪಾದಕ ದಾಳಿ: ನವವಿವಾಹಿತ ನೌಕಾಪಡೆ ಅಧಿಕಾರಿ ಹುತಾತ್ಮ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 22:30 IST
Last Updated 23 ಏಪ್ರಿಲ್ 2025, 22:30 IST
<div class="paragraphs"><p>ವಿನಯ್‌ ನರ್ವಾಲ್‌</p></div>

ವಿನಯ್‌ ನರ್ವಾಲ್‌

   

ಚಂಡೀಗಢ/ಕೊಚ್ಚಿ: ಕೆಲ ದಿನಗಳ ಹಿಂದಷ್ಟೇ ವಿವಾಹವಾಗಿ, ತಮ್ಮ ಪತ್ನಿಯೊಂದಿಗೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ಗೆ ಮಧುಚಂದ್ರಕ್ಕೆ ಹೋಗಿದ್ದ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್‌ ವಿನಯ್‌ ನರ್ವಾಲ್‌ (26) ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ.

ನರ್ವಾಲ್‌ ಅವರು ಏಪ್ರಿಲ್ 16ರಂದು ಹಿಮಾಂಶಿ ನರ್ವಾಲ್‌ ಜತೆಗೆ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಮೂರು ದಿನಗಳ ನಂತರ ಈ ಜೋಡಿಯ ಆರತಕ್ಷತೆ ಅದ್ದೂರಿಯಾಗಿ ನೆರವೇರಿತ್ತು.

ADVERTISEMENT

ಹರಿಯಾಣದ ಕರ್ನಾಲ್ ಜಿಲ್ಲೆಯ ಭುಸ್ಲಿ ಗ್ರಾಮದವರಾದ ವಿನಯ್‌ ನರ್ವಾಲ್‌ ಅವರು 2022ರಲ್ಲಿ ನೌಕಾಪಡೆಗೆ ಸೇರಿದ ನಂತರ ಕಳೆದ ಒಂದೂವರೆ ವರ್ಷಗಳಿಂದ ಕೊಚ್ಚಿಯ ದಕ್ಷಿಣ ನೌಕಾ ಕಮಾಂಡ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ನರ್ವಾಲ್ ಅವರ ಕುಟುಂಬವು ಪ್ರಸ್ತುತ ಕರ್ನಾಲ್ ನಗರದಲ್ಲಿ ವಾಸಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಿಟ್ಜರ್ಲೆಂಡ್‌ಗೆ ಹೋಗಬೇಕಿದ್ದ ದಂಪತಿ?

ನರ್ವಾಲ್‌ ಅವರ ನೆರೆಹೊರೆಯವರಾದ ಸೀಮಾ ಅವರು ‘ಮದುವೆಯ ನಂತರ ನರ್ವಾಲ್ ಕುಟುಂಬ ಮಾತ್ರವಲ್ಲದೆ ಇಡೀ ನೆರೆಹೊರೆಯು ಸಂಭ್ರಮಾಚರಣೆಯಲ್ಲಿತ್ತು. ನವದಂಪತಿ ಮಧುಚಂದ್ರಕ್ಕೆ ಸ್ವಿಟ್ಜರ್ಲೆಂಡ್‌ಗೆ ಹೋಗಲು ಯೋಜಿಸಿದ್ದರು. ಆದರೆ, ಅವರಿಗೆ ಲಭ್ಯವಿದ್ದ ರಜೆ ಪರಿಗಣಿಸಿ ಕಾಶ್ಮೀರಕ್ಕೆ ಹೋಗಿದ್ದರು. ಈಗ ಅವರ ಇಡೀ ಕುಟುಂಬ ಅನುಭವಿಸುತ್ತಿರುವ ನೋವನ್ನು ಯಾರಿಗೂ ಊಹಿಸಿಕೊಳ್ಳಲು ಆಗದು’ ಎಂದು ಪ್ರತಿಕ್ರಿಯಿಸಿದ್ದಾರೆ.

ಆಘಾತ ವ್ಯಕ್ತಪಡಿಸಿದ ನೌಕಾಪಡೆ

‘ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ದುರಂತ ಸಾವಿನಿಂದ ನೌಕಾ ಸಿಬ್ಬಂದಿ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಮತ್ತು ಭಾರತೀಯ ನೌಕಾಪಡೆಯ ಎಲ್ಲಾ ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ ಮತ್ತು ತೀವ್ರ ದುಃಖಿತರಾಗಿದ್ದಾರೆ’ ಎಂದು ನೌಕಾಪಡೆಯ ವಕ್ತಾರರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಲೆಫ್ಟಿನೆಂಟ್ ನರ್ವಾಲ್ ಅವರು ಸದಾ ಹರ್ಷಚಿತ್ತದಿಂದ ಇರುತ್ತಿದ್ದರು. ಕರ್ತವ್ಯ ಬದ್ಧತೆ ಮತ್ತು ಸಮರ್ಪಣೆಗೆ ಹೆಸರಾಗಿದ್ದರು’ ಎಂದು ಅವರ ಸಹೋದ್ಯೋಗಿಗಳು ಮತ್ತು ನೌಕಾಪಡೆಯ ಅಧಿಕಾರಿಗಳು ಸ್ಮರಿಸಿದ್ದಾರೆ.  

ಕೊಚ್ಚಿ ಮೂಲದ ವ್ಯಕ್ತಿ ಬಲಿ: 

ಭಯೋತ್ಪಾದಕರ ದಾಳಿಯಲ್ಲಿ ಕೊಲ್ಲಲ್ಪಟ್ಟ ಇತರರಲ್ಲಿ ಕೊಚ್ಚಿ ಮೂಲದ ಎಡಪ್ಪಳ್ಳಿಯ ರಾಮಚಂದ್ರನ್ (65) ಸೇರಿದ್ದಾರೆ. ಅವರು ತಮ್ಮ ಪತ್ನಿ, ಮಗಳು ಮತ್ತು ಮೊಮ್ಮಕ್ಕಳೊಂದಿಗೆ ರಜಾದಿನ ಕಳೆಯಲು ಕಾಶ್ಮೀರಕ್ಕೆ ಹೋಗಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.