ADVERTISEMENT

ನೀರಿನ ಪ್ರಮಾಣ ತಗ್ಗಿದ್ದರೆ ಕಾರ್ಯಾಚರಣೆ ಶುರು

ಮೇಘಾಲಯ ಗಣಿ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ

ಪಿಟಿಐ
Published 31 ಡಿಸೆಂಬರ್ 2018, 19:06 IST
Last Updated 31 ಡಿಸೆಂಬರ್ 2018, 19:06 IST
ನೀರಿನಾಳದಲ್ಲಿ ಈಜಲು ಬಳಸುವ ಉಪಕರಣವನ್ನು ಸಿದ್ಧಪಡಿಸುತ್ತಿರುವ ನೌಕಾಪಡೆ ಸಿಬ್ಬಂದಿ –ರಾಯಿಟರ್ಸ್ ಚಿತ್ರ
ನೀರಿನಾಳದಲ್ಲಿ ಈಜಲು ಬಳಸುವ ಉಪಕರಣವನ್ನು ಸಿದ್ಧಪಡಿಸುತ್ತಿರುವ ನೌಕಾಪಡೆ ಸಿಬ್ಬಂದಿ –ರಾಯಿಟರ್ಸ್ ಚಿತ್ರ   

ಲುಮಥರಿ, ಮೇಘಾಲಯ: ಜಲಾವೃತ ಕಲ್ಲಿದ್ದಲು ಗಣಿಯೊಳಗೆ ಪ್ರವೇಶಿಸಿರುವ ನೌಕಾಪಡೆ ಸಿಬ್ಬಂದಿ, ನೀರಿನ ಪ್ರಮಾಣ ತಗ್ಗುವವರೆಗೆ ಕಾಯಲು ನಿರ್ಧರಿಸಿದ್ದಾರೆ.

18 ದಿನಗಳಿಂದ ಗಣಿ ಕಂದರದೊಳಗೆಸಿಲುಕಿರುವ ಸಿಬ್ಬಂದಿ ರಕ್ಷಣೆಗೆ ನೌಕಾಪಡೆಯ ಮುಳುಗುತಜ್ಞರು ಅತ್ಯಾಧುನಿಕ ತಾಂತ್ರಿಕ ಸಲಕರಣೆಗಳನ್ನು ಹೊತ್ತೊಯ್ದಿದ್ದಾರೆ.ರಿಮೋಟ್ ನಿಯಂತ್ರಿತ ಜಲಾಂತರ್ಗಾಮಿ ವಾಹನದ ಮೂಲಕ ನೀರಿನೊಳಗೆ ತೆರಳಿ, ಮೂರು ತಾಸು ಹುಡುಕಾಟ ನಡೆಸಿದರು ಎಂದು ಕಾರ್ಯಾಚರಣೆಯ ವಕ್ತಾರರು ತಿಳಿಸಿದ್ದಾರೆ.

ನೀರು ಹೊರಹಾಕುವ 10 ಶಕ್ತಿಶಾಲಿ ಪಂಪ್‌ಗಳು ಒಡಿಶಾದ ರಕ್ಷಣಾ ತಂಡ ತಂದಿದೆ. ಈ ಪೈಕಿ ಎರಡನ್ನು ಗಣಿಯೊಳಗೆ ಇಳಿಸುವ ಉದ್ದೇಶವಿದೆ. ನಿಮಿಷಕ್ಕೆ 500 ಗ್ಯಾಲನ್ ನೀರ ಹೊರಹಾಕುವ ಸಾಮರ್ಥ್ಯದ ಸಬ್‌ಮರ್ಸಿಬಲ್ ಪಂಪ್ ರಾಂಚಿಯಿಂದ ಬರಲಿದೆ. ಇಷ್ಟೇ ಸಾಮರ್ಥ್ಯದ ಮತ್ತೆ ಐದು ಪಂಪ್‌ಗಳನ್ನು ತರಿಸಲಾಗುತ್ತಿದೆ.ನೀರಿನ ಪ್ರಮಾಣ 98 ಅಡಿಗಳಿಗೆ ತಗ್ಗಿದ ಬಳಿಕ ಮುಳುಗುತಜ್ಞರು ನೀರಿನಲ್ಲಿ ಈಜಿ ಕಾರ್ಯಾಚರಣೆ ಚುರುಕುಗೊಳಿಸಲಿದ್ದಾರೆ.

ADVERTISEMENT

ಇಂತಹ ಪರಿಸ್ಥಿತಿಯಲ್ಲಿ ಮುಳುಗುತಜ್ಞರು ಗಾಳಿಯೊತ್ತಡದ ಕಾಯಿಲೆಗೆ ತುತ್ತಾಗುವ ಸಾಧ್ಯತೆಯಿರುವುದರಿಂದ ರಕ್ಷಣಾ ತಂಡದ ಮುಖ್ಯಸ್ಥರು ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ.

ಮೇಘಾಲಯದ ತುಮಥಾರಿ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲಿದ್ದಲು ಗಣಿಯೊಳಗೆ ಸಮೀಪದ ನದಿಯ ನೀರು ನುಗ್ಗಿದ್ದರಿಂದ ಅನಾಹುತ ಸಂಭವಿಸಿದೆ. ಡಿಸೆಂಬರ್ 13ರಿಂದ 15 ಕಾರ್ಮಿಕರು ಗಣಿಯಲ್ಲಿ ಸಿಲುಕಿದ್ಧಾರೆ.

ಭಾನುವಾರ ಗಣಿಯೊಳಗೆ ತೆರೆಳಿದ್ದ ಮುಳುಗುತಜ್ಞರು ಎರಡು ಗಂಟೆ ಹುಡುಕಾಟ ನಡೆಸಿದ್ದರು. ಆದರೆ ಕಾರ್ಮಿಕರು ಪತ್ತೆಯಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.