ADVERTISEMENT

ನಕ್ಸಲ್ ದಾಳಿ: ಛತ್ತೀಸ್‌ಗಡಕ್ಕೆ ಇಂದು ಗೃಹ ಸಚಿವ ಅಮಿತ್ ಶಾ ಭೇಟಿ

ಹುತಾತ್ಮ ಯೋಧರಿಗೆ ಗೌರವ ಸಲ್ಲಿಕೆ, ಉನ್ನತ ಮಟ್ಟದ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ

ಪಿಟಿಐ
Published 5 ಏಪ್ರಿಲ್ 2021, 5:25 IST
Last Updated 5 ಏಪ್ರಿಲ್ 2021, 5:25 IST
ಅಮಿತ್ ಶಾ
ಅಮಿತ್ ಶಾ   

ಜಗದಾಲ್‌ಪುರ: ನಕ್ಸಲ್ ದಾಳಿಯ ಹಿನ್ನೆಲೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಇಂದು (ಸೋಮವಾರ) ಬಸ್ತಾರ್ ವಲಯಕ್ಕೆ ಭೇಟಿ ನೀಡಿ, ಉನ್ನತಮಟ್ಟದ ಸಭೆ ನಡೆಸಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಗೃಹ ಸಚಿವ ಅಮಿತ್‌ ಶಾ ಅವರು ಬೆಳಿಗ್ಗೆ ಜಗದಾಲ್‌ಪುರ ವಿಮಾನ ನಿಲ್ದಾಣ ತಲುಪಲಿದ್ದಾರೆ. ನಂತರ ಅವರು ಇಲ್ಲಿನ ಪೊಲೀಸ್ ಲೈನ್‌ನಲ್ಲಿ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲಿದ್ದಾರೆ ಎಂದು ಅವರು ಹೇಳಿದರು. ಶಾ ಗೃಹ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಬಸ್ತಾರ್ ವಲಯಕ್ಕೆ ಭೇಟಿ ನೀಡುತ್ತಿದ್ದಾರೆ.

‌ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ 14 ಭದ್ರತಾ ಸಿಬ್ಬಂದಿಯ ಪಾರ್ಥಿವ ಶರೀರಗಳಿಗೆ ಪುಷ್ಪನಮನ ಸಲ್ಲಿಸಿದ ನಂತರ, ಇನ್ನುಳಿದ ಹುತಾತ್ಮ ಯೋಧರಿಗೆ ಬಿಜಾಪುರ ಜಿಲ್ಲಾ ಕಚೇರಿಯಲ್ಲಿ ಗೌರವ ನಮನ ಸಲ್ಲಿಸಲಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದರು.

ADVERTISEMENT

ಈ ಕಾರ್ಯಕ್ರಮಗಳ ಇಲ್ಲಿನ ಪೊಲೀಸ್ ಸಮನ್ವಯ ಕೇಂದ್ರದಲ್ಲಿ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆಯಲಿದೆ. ಸಭೆಯಲ್ಲಿ ಮುಖ್ಯಮಂತ್ರಿ ಸಭೆಯಲ್ಲಿ ಮುಖ್ಯಮಂತ್ರಿ ಭೂಪೇಶ್ ಬಾಗೇಲ್, ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಸಭೆಯ ನಂತರ ಬಿಜಾಪುರದ ಸಿಆರ್‌ಪಿಎಫ್‌ನ ಬಸಗುಡ ಶಿಬಿರಕ್ಕೆ ತೆರಳಿದ್ದು, ಅಲ್ಲಿನ ಸಿಆರ್‌ಪಿಎಫ್‌ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಅವರು ರಾಯಪುರಕ್ಕೆ ತೆರಳಿಗೆ ನಕ್ಸಲ್ ದಾಳಿ ವೇಳೆ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭದ್ರತಾ ಸಿಬ್ಬಂದಿ ಮತ್ತು ಯೋಧರನ್ನು ಭೇಟಿಯಾಗಿ, ಸಂಜೆ 5. 30ಕ್ಕೆ ದೆಹಲಿಗೆ ತೆರಳಲಿದ್ದಾರೆ.

ಭಾನುವಾರ ಛತ್ತೀಸ್‌ಗಡದ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿರುವ ಜೊನಾಗುಡಾ ಮತ್ತು ತೆಕಾಲ್‌ಗುಡಾ ಗ್ರಾಮಗಳ ನಡುವೆ ಮಾವೊವಾದಿ ನಕ್ಸಲರು ಮತ್ತು ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಪ್ಪತ್ತೆರಡು ಮಂದಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು. 31 ಮಂದಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.