
ಸಾಂದರ್ಭಿಕ ಚಿತ್ರ
ಅಮರಾವತಿ: ಆಂಧ್ರಪ್ರದೇಶದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ಮುಂದುವರಿದಿದ್ದು, ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಮಾರೇಡುಮಿಲ್ಲಿ ಅರಣ್ಯ ಪ್ರದೇಶದಲ್ಲಿ ಬುಧವಾರ ಮತ್ತೆ ಏಳು ಮಂದಿಯನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ.
ಮಂಗಳವಾರ ಇಲ್ಲಿಂದ 7 ಕಿ.ಮೀ. ದೂರದಲ್ಲಿ ನಡೆದಿದ್ದ ಎನ್‌ಕೌಂಟರ್‌ನಲ್ಲಿ ನಕ್ಸಲರ ಕೇಂದ್ರ ಸಮಿತಿ ಸದಸ್ಯ, ಛತ್ತೀಸಗಢದ ಮಾಡವಿ ಹಿಡ್ಮಾ ಮತ್ತು ಆತನ ಪತ್ನಿ ಮದಕಂ ರಾಜೆ ಸೇರಿ ಒಟ್ಟು 6 ನಕ್ಸಲರನ್ನು ಆಂಧ್ರಪ್ರದೇಶ ಪೊಲೀಸರು ಹತ್ಯೆ ಮಾಡಿದ್ದರು.
ಬುಧವಾರ ಎನ್‌ಕೌಂಟರ್‌ನಲ್ಲಿ ಮೃತಪಟ್ಟವರಲ್ಲಿ ಮೂವರು ಮಹಿಳೆಯರೂ ಸೇರಿದ್ದಾರೆ’ ಎಂದು ಆಂಧ್ರಪ್ರದೇಶದ ಗುಪ್ತಚರ ವಿಭಾಗದ ಎಡಿಜಿಪಿ ಮಹೇಶ್‌ಚಂದ್ರ ಲಡ್ಡಾ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿರುವ ನಕ್ಸಲರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಇವರಲ್ಲಿ ಒಬ್ಬರನ್ನು ಮೆಟ್ಟೂರಿ ಜೋಗರಾವ್ ಅಲಿಯಾಸ್ ಟೆಕ್ ಶಂಕರ್ ಎಂದು ಗುರುತಿಸಲಾಗಿದೆ.
ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಟೆಕ್ ಶಂಕರ್, ಆಂಧ್ರ–ಒಡಿಶಾ ಗಡಿ ಪ್ರದೇಶದ ಮಾವೋವಾದಿ ಘಟಕದ ಉಸ್ತುವಾರಿಯಾಗಿದ್ದು, ಶಸ್ತ್ರಾಸ್ತ್ರ, ಬಾಂಬ್ ತಯಾರಿಕೆ, ಬಳಕೆ ಸೇರಿದಂತೆ ತಾಂತ್ರಿಕ ಪರಿಣಿತಿ ಪಡೆದಿದ್ದ ಎಂದು ಲಡ್ಡಾ ಹೇಳಿದರು.
50 ನಕ್ಸಲರ ಬಂಧನ
ಆಂಧ್ರಪ್ರದೇಶ ಪೊಲೀಸರು ಮಂಗಳವಾರ ಮತ್ತು ಬುಧವಾರ ಕೃಷ್ಣ ಎಲೂರು ಎನ್‌ಟಿಆರ್ ವಿಜಯವಾಡ ಕಾಕಿನಾಡ ಸೇರಿದಂತೆ 5 ಜಿಲ್ಲೆಗಳಲ್ಲಿ ತ್ವರಿತ ಕಾರ್ಯಾಚರಣೆ ನಡೆಸಿ 50 ನಕಲ್ಸರನ್ನು ಬಂಧಿಸಿದ್ದಾರೆ. ಇದರಲ್ಲಿ ಮಾವೋವಾದಿಗಳ ವಿಶೇಷ ವಲಯ ಸಮಿತಿ ವಿಭಾಗೀಯ ಸಮಿತಿ ಹಾಗೂ ಸ್ಥಳೀಯ ಸಮಿತಿ ಸದಸ್ಯರೂ ಸೇರಿದ್ದಾರೆ. ಹೆಚ್ಚಿನವರು ದಕ್ಷಿಣ ಬಸ್ತಾರ್ ದಂಡಕಾರಣ್ಯ ವಲಯದಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದ್ದರು. ‘ಯಾರೂ ತಪ್ಪಿಸಿಕೊಳ್ಳದಂತೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಇಡೀ ಕಾರ್ಯಾಚರಣೆಯನ್ನು ಅತ್ಯಂತ ಕರಾರುವಕ್ಕಾಗಿ ನಡೆಸಲಾಯಿತು’ ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥ ರಾಮಕೃಷ್ಣ ಸುದ್ದಿಸಂಸ್ಥೆಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.