ದೇವ್ ಜಿ
ಹೈದರಾಬಾದ್: ಕಳೆದ ಆರು ದಶಕಗಳಿಂದ ದೇಶದ ಪ್ರಭಾವಿ ನಕ್ಸಲ್ ಮುಖಂಡರಾಗಿದ್ದ ತಿಪ್ಪಿರಿ ತಿರುಪತಿ ಅಲಿಯಾಸ್ ದೇವ್‌ಜಿ (ದೇವ್ ಜಿ) ಇಂದು ತೆಲಂಗಾಣದ ಉನ್ನತ ಪೊಲೀಸ್ ಅಧಿಕಾರಿಗಳ ಎದುರು ಶರಣಾಗಲಿದ್ದಾರೆ.
ಇಂದು ಸಂಜೆ ತೆಲಂಗಾಣ ರಾಜ್ಯ ಪೊಲೀಸ್ ಕಚೇರಿಯಲ್ಲಿ ಶರಣಾಗತಿಯ ಔಪಚಾರಿಕ ಪ್ರಕ್ರಿಯೆಗಳನ್ನು ಪೊಲೀಸರು ಪೂರೈಸಲಿದ್ದಾರೆ. ಹಲವು ದಶಕಗಳ ಬಳಿಕ ಹೊರಜಗತ್ತಿಗೆ ದೇವ್‌ಜಿ ಕಾಣಿಸಿಕೊಳ್ಳುತ್ತಿದ್ದಾರೆ.
ದೇವ್‌ಜಿ ಶರಣಾಗತಿಯನ್ನು ದೇಶದಲ್ಲಿ ನಕ್ಸಲ್ ಚಟುವಟಿಕೆ ಅಂತ್ಯಗೊಳ್ಳುವ ನಿರ್ಣಾಯಕ ಹಂತ ಎಂದೇ ವಿಶ್ಲೇಷಿಸಲಾಗಿದೆ.
ಶರಣಾಗತಿಯ ಕುರಿತು ತೆಲಂಗಾಣ ಡಿಜಿಪಿ ಶಿವಧರ್ ರೆಡ್ಡಿ ಅವರು ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಅದರಲ್ಲಿ ತೆಲಂಗಾಣದ ನಕ್ಸಲ್ ಚಳವಳಿಯ ಕುರಿತು ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ನಕ್ಸಲ್ ಮುಖಂಡರಾದ ಮಲ್ಲ ರಾಜಿ ರೆಡ್ಡಿ ಅಲಿಯಾಸ್ ಸಂಗ್ರಾಮ್, ನರಸಿಂಹ ರೆಡ್ಡಿ ಅಲಿಯಾಸ್ ಗಂಗಣ್ಣ ಮತ್ತು ಇತರೆ 16 ಮಂದಿ ನಕ್ಸಲರೊಂದಿಗೆ ದೇವ್‌ಜಿ ಶರಣಾಗಿರುವುದನ್ನು ತೆಲಂಗಾಣ ಪೊಲೀಸರ ವಿಶೇಷ ಗುಪ್ತಚರ ಘಟಕವು ‘ಪ್ರಜಾವಾಣಿ‘ಗೆ ಖಚಿತಪಡಿಸಿದೆ.
‘ದೇವ್‌ಜಿ ಮತ್ತು ತಂಡ ಎರಡು ದಿನಗಳ ಹಿಂದೆ ಆಸಿಫಾಬಾದ್ ಕಾಡಿನಿಂದ ಹೊರಬಂದು ಪೊಲೀಸರ ಮುಂದೆ ಶರಣಾಗಿದ್ದಾರೆ. ಶೀಘ್ರದಲ್ಲೇ ಶರಣಾಗತಿಯನ್ನು ಅಧಿಕೃತಗೊಳಿಸಿ, ಸಾರ್ವಜನಿಕವಾಗಿ ಪ್ರಕಟಿಸಲಾಗುವುದು’ ಎಂದು ಮೂಲಗಳು ತಿಳಿಸಿದ್ದವು.
ಆಪರೇಷನ್ ಬ್ಲ್ಯಾಕ್ ಫಾರೆಸ್–2 ಕಾರ್ಯಾಚರಣೆಗಾಗಿ ತೆಲಂಗಾಣ–ಛತ್ತೀಸಗಢ ಗಡಿಯಲ್ಲಿ ಅಪಾರ ಸಂಖ್ಯೆಯ ಭದ್ರತಾ ಸಿಬ್ಬಂದಿ ನಿಯೋಜನೆಗೊಂಡ ಬೆನ್ನಲ್ಲೇ ದೇವ್‌ಜಿ ಶರಣಾಗತಿ ನಡೆದಿದೆ.
2010ರಲ್ಲಿ ತಾಡ್‌ಮೆಟ್ಲಾದಲ್ಲಿ (ದಂತೆವಾಡ) 76 ಮಂದಿ ಸಿಆರ್‌ಪಿಎಫ್ ಸಿಬ್ಬಂದಿ ಹತ್ಯೆಗೆ ಕಾರಣವಾದ ಗೆರಿಲ್ಲಾ ದಾಳಿಯ ಹಿಂದಿನ ಸೂತ್ರಧಾರ ದೇವ್‌ಜಿ ಎನ್ನಲಾಗುತ್ತದೆ. ದೇಶವನ್ನು ನಕ್ಸಲ್ ಮುಕ್ತ ಎಂದು ಘೋಷಿಸಲು ಕೇಂದ್ರ ಸರ್ಕಾರ ಮಾರ್ಚ್ 31ರ ಗಡುವು ನಿಗದಿಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.