ಸುಕ್ಮಾ, (ಛತ್ತೀಸಗಢ): ಜಿಲ್ಲೆಯ ಚಿಂತಾಗುಫಾ ಪೊಲೀಸ್ ಠಾಣಾ ವ್ಯಾಪ್ತಿಯ ಪೆಂಟಾಪಾಡ್ ಗ್ರಾಮದ 65 ವರ್ಷದ ವ್ಯಕ್ತಿಯನ್ನು ನಕ್ಸಲರು ಹತ್ಯೆ ಮಾಡಿದ್ದಾರೆ.
ಸೋಮವಾರ ರಾತ್ರಿ ಹತ್ಯೆ ಮಾಡಿದ್ದು, ಮೃತರನ್ನು ಕಲ್ಮುಂ ಹಿದ್ಮಾ ಎಂದು ಗುರುತಿಸಲಾಗಿದೆ. ಹತ್ಯೆಗೆ ಕಾರಣ ಏನು ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಮೃತ ವ್ಯಕ್ತಿಯು ಮಾಜಿ ಶಾಸಕ ಮನೀಶ್ ಕುಂಜಮ್ ಅವರ ಸಂಬಂಧಿ ಎಂದು ತಿಳಿದುಬಂದಿದೆ.
‘ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಹೆಚ್ಚಿನ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹತ್ಯೆಯೊಂದಿಗೆ ಬಸ್ತಾರ್ ವಿಭಾಗದಲ್ಲಿ ಈ ವರ್ಷ ನಕ್ಸಲರ ದಾಳಿಗೆ ಮೃತಪಟ್ಟವರ ಸಂಖ್ಯೆ 8ಕ್ಕೇರಿದ್ದು, ಸುಕ್ಮಾ ಜಿಲ್ಲೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷ ಒಟ್ಟು 68 ಮಂದಿ ಮೃತಪಟ್ಟಿದ್ದರು.
ಇಬ್ಬರು ನಕ್ಸಲರ ಹತ್ಯೆ: ಇಲ್ಲಿನ ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಮೃತಪಟ್ಟಿದ್ದಾರೆ.
ಕಿಸ್ಟಾರಂ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡರಾಗ್‌ಗುಡೆಂ ಗ್ರಾಮದಲ್ಲಿ ಬೆಳಿಗ್ಗೆ ನಕ್ಸಲ್ ನಿಗ್ರಹ ಪಡೆ ಶೋಧ ಕಾರ್ಯ ನಡೆಸುತ್ತಿದ್ದಾಗ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ನಕ್ಸಲರು ಮೃತಪಟ್ಟರು’ ಎಂದು ಸುಕ್ಮಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವ್ಹಾಣ್ ತಿಳಿಸಿದರು.
ಕಳೆದ 60 ದಿನಗಳಲ್ಲಿ ಬಸ್ತಾರ್ ವಿಭಾಗದಲ್ಲಿ 60 ನಕ್ಸಲರನ್ನು ಮಟ್ಟಹಾಕಲಾಗಿದೆ ಎಂದು ಮುಖ್ಯಮಂತ್ರಿ ವಿಷ್ಣು ದೇವ ಸಾಯಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.