ADVERTISEMENT

ಮುಂಬೈ, ಗುಜರಾತ್‌ನಲ್ಲಿ ದಾಳಿ: ₹120 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ; 6 ಜನರ ಬಂಧನ

ಪಿಟಿಐ
Published 7 ಅಕ್ಟೋಬರ್ 2022, 11:09 IST
Last Updated 7 ಅಕ್ಟೋಬರ್ 2022, 11:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ (ಪಿಟಿಐ): ಮುಂಬೈ ಮತ್ತು ಗುಜರಾತ್‌ನ ವಿವಿಧೆಡೆ ದಾಳಿ ನಡೆಸಿರುವ ರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಅಧಿಕಾರಿಗಳು ₹120 ಕೋಟಿ ಮೌಲ್ಯದ ಮೆಫೆಡ್ರೋನ್‌ ಹೆಸರಿನ 60 ಕೆ.ಜಿ. ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಅಂತರರಾಜ್ಯ ಡ್ರಗ್ಸ್‌ ಪೂರೈಕೆ ಜಾಲಕ್ಕೆ ಸಂಬಂಧಿಸಿದಂತೆ ಏರ್‌ ಇಂಡಿಯಾದ ಮಾಜಿ ಪೈಲಟ್‌ ಒಳಗೊಂಡಂತೆ ಆರು ಜನರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೌಕಾಪಡೆಯಗುಜರಾತ್‌ನ ಗುಪ್ತಚರ ವಿಭಾಗಕ್ಕೆ ಬಂದ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಲಾಯಿತು ಎಂದು ಎನ್‌ಸಿಬಿಯ ಉಪ ಮಹಾನಿರ್ದೇಶಕ ಸಂಜಯ್‌ ಸಿಂಗ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಈ ಜಾಲ ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಎನ್‌ಸಿಬಿ ತಂಡ ಜಾಮ್‌ನಗರದಲ್ಲಿ ಒಬ್ಬನನ್ನು ಬಂಧಿಸಿ 10 ಕೆ.ಜಿ ಮೆಫೆಡ್ರೋನ್ ವಶಕ್ಕೆ ಪಡೆದಿದ್ದು, ಮುಂಬೈನಲ್ಲಿ ಮೂವರನ್ನು ಬಂಧಿಸಲಾಗಿದೆ. ಗುರುವಾರ ದಕ್ಷಿಣ ಮುಂಬೈನ ಎಸ್.ಬಿ.ರಸ್ತೆಯಲ್ಲಿನ ಗೋದಾಮಿನ ಮೇಲೆ ದಾಳಿ ನಡೆಸಿ ಮತ್ತೆ 50 ಕೆ.ಜಿ. ಮೆಫೆಡ್ರೋನ್‌ ವಶಕ್ಕೆ ಪಡೆದಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ಆರೋಪಿಯಲ್ಲಿ ಒಬ್ಬನು ಏರ್‌ ಇಂಡಿಯಾಗೆ ಕೆಳಹಂತದ ಸಿಬ್ಬಂದಿಯಾಗಿ ಸೇರಿದ್ದು, ಬಳಿಕ ಪೈಲಟ್‌ ಕೋರ್ಸ್‌ ಮಾಡಿಕೊಂಡು 2016ರಿಂದ 2018ರ ಅವಧಿಯಲ್ಲಿ ಪೈಲಟ್‌ ಆಗಿ ಕಾರ್ಯನಿರ್ವಹಿಸಿದ್ದ. ಟೆಕ್ಸಾಸ್‌ನ ಸ್ಯಾನ್ ಆ್ಯಂಟನಿಯೊದಲ್ಲಿ ತರಬೇತಿಯನ್ನೂ ಪಡೆದಿದ್ದ. ಆರೋಗ್ಯಕ್ಕೆ ಸಂಬಂಧಿಸಿದ ಕಾರಣಗಳಿಗೆ ಕೆಲಸವನ್ನು ಬಿಟ್ಟ ಬಳಿಕ ಈ ದಂಧೆಯನ್ನು ಆರಂಭಿಸಿದ್ದ ಎಂದು ವಿವರಿಸಿದರು.

ಈ ಜಾಲದ ಮೂಲಕ ಆರೋಪಿಗಳು ಇದುವರೆಗೂ ವಿವಿಧ ರಾಜ್ಯಗಳಿಗೆ ಸುಮಾರು 225 ಕೆ.ಜಿ. ಮೆಫೆಡ್ರೋನ್‌ ಸರಬರಾಜು ಮಾಡಿರುವ ಕುರಿತ ಮಾಹಿತಿ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.