ADVERTISEMENT

ಎನ್‌ಸಿಸಿ ಪ್ರಮಾಣಪತ್ರವಿದ್ದರೆ ಪ್ಯಾರಾಮಿಲಿಟರಿ ಪಡೆ ನೇಮಕಾತಿಯಲ್ಲಿ ಆದ್ಯತೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 10:05 IST
Last Updated 19 ಮಾರ್ಚ್ 2020, 10:05 IST
   

ನವದೆಹಲಿ: ಕೇಂದ್ರ ಶಶಸ್ತ್ರ ಪೊಲೀಸ್‌ ಪಡೆಯ (ಸಿಎಪಿಎಫ್‌ಎಸ್‌) ಸಬ್‌ ಇನ್ಸ್‌ಪೆಕ್ಟರ್‌ ಮತ್ತು ಕಾನ್‌ಸ್ಟೇಬಲ್‌ ಹುದ್ದೆಗಳಿಗೆ ನಡೆಯಲಿರುವ ನೇರ ನೇಮಕಾತಿಯಲ್ಲಿ ಎನ್‌ಸಿಸಿ (ರಾಷ್ಟ್ರೀಯ ಕೆಡೆಟ್‌ ಕಾರ್ಪ್ಸ್‌) ಪ್ರಮಾಣಪತ್ರವಿದ್ದವರಿಗೆ ಆದ್ಯತೆ ದೊರೆಯಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಎನ್‌ಸಿಸಿ ಪ್ರಮಾಣಪತ್ರ ಹೊಂದಿರುವವರಿಗೆ ನೇಮಕಾತಿಯ ನೇರ ಪ್ರವೇಶ ಪರೀಕ್ಷೆಯಲ್ಲಿ ಬೋನಸ್‌ ಅಂಕ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ನೇಮಕಾತಿಯಲ್ಲಿ ಆದ್ಯತೆ ಕಲ್ಪಿಸಲಾಗುತ್ತದೆ. ಅದರಂತೆ ಎನ್‌ಸಿಸಿಯ ‘ಸಿ’ ಪ್ರಮಾಣ ಪತ್ರ ಹೊಂದಿರುವವರಿಗೆ ಒಟ್ಟು ಅಂಕಿಗಳಲ್ಲಿ ಶೇ. 5ರಷ್ಟು ಬೋನಸ್‌ ಅಂಕಗಳು ದೊರೆತರೆ, ‘ಬಿ‘ ಪ್ರಮಾಣಪತ್ರಕ್ಕೆ ಶೇ. 3, ‘ಎ’ ಪ್ರಮಾಣಪತ್ರಕ್ಕೆ ಶೇ. 2 ಅಂಕಗಳು ದೊರೆಯಲಿವೆ. ಮುಂದೆ ನಡೆಯಲಿರುವ ಸಿಎಪಿಎಫ್‌ಎಸ್‌ ನೇಮಕಾತಿಯಲ್ಲಿ ‘ಎ’ ಪ್ರಮಾಣ ಪತ್ರ ಹೊಂದಿರವವರಿಗೂ ಆದ್ಯತೆ ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

ಎನ್‌ಸಿಸಿ ಪ್ರಮಾಣಪತ್ರ ಹೊಂದಿರುವವರನ್ನು ಆಯಾ ರಾಜ್ಯಗಳ ಶಶಸ್ತ್ರ ಪೊಲೀಸ್‌ ಪಡೆಗಳ ನೇರ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಉತ್ತೇಜನ ನೀಡುವಂತೆ ಕೇಂದ್ರ ಸರ್ಕಾರವು ದೇಶದ ವಿವಿಧ ರಾಜ್ಯಗಳಿಗೆ ಸೂಚನೆ ನೀಡಲೂ ನಿರ್ಧರಿಸಿದೆ ಎಂದು ಗೃಹ ಇಲಾಖೆ ತಿಳಿಸಿದೆ.

ADVERTISEMENT

ಎನ್‌ಸಿಸಿಯಲ್ಲಿ ಯುವಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಈ ನಿರ್ಧಾರ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.