
ಜಂಟಿ ಪ್ರಣಾಳಿಕೆ ಬಿಡುಗಡೆ ಮಾಡಿದ ಸುಪ್ರಿಯಾ ಸುಳೆ ಹಾಗೂ ಅಜಿತ್ ಪವಾರ್
– ಎಕ್ಸ್ ಚಿತ್ರ
ಪುಣೆ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಹಾಗೂ ಅವರ ಸೋದರ ಮಾವ ಶರದ್ ಪವಾರ್ ನಾಯಕತ್ವದ ಎನ್‌ಸಿಪಿ (ಎಸ್‌ಪಿ) ಪಕ್ಷಗಳು ಮುಂಬರುವ ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆ ಮಾಡಿದವು.
ಅಜಿತ್ ಪವಾರ್ ಹಾಗೂ ಅವರ ಸೋದರ ಸಂಬಂಧಿ, ಸಂಸದೆಯೂ ಆಗಿರುವ ಎನ್‌ಸಿಪಿಯ (ಎಸ್‌ಪಿ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಜಿಂಟಿ ಪತ್ರಿಕಾಗೋಷ್ಠಿ ನಡೆಸಿ ಪ್ರಾಣಾಳಿಕೆ ಬಿಡುಗಡೆ ಮಾಡಿದರು. 2023ರಲ್ಲಿ ಪಕ್ಷ ಹೋಳಾದ ಬಳಿಕ ಎರಡೂ ಬಣಗಳ ನಡುವೆ ಹೆಚ್ಚುತ್ತಿರುವ ಸಾಮೀಪ್ಯವನ್ನು ಸೂಚಿಸುತ್ತಿತ್ತು.
ಎನ್‌ಸಿಪಿಯು ಆಡಳಿತರೂಢ ಮಹಾಯುತಿ ಮೈತ್ರಿಕೂಟದ ಭಾಗವಾಗಿದ್ದರೆ, ಎನ್‌ಸಿಪಿ (ಎಸ್‌ಪಿ) ವಿರೋಧ ಪಕ್ಷಗಳ ಒಕ್ಕೂಟ ಮಹಾ ವಿಕಾಸ್ ಅಘಾಡಿಯ ಭಾಗವಾಗಿದೆ. ಆದರೆ ಜನವರಿ 15ರಂದು ನಡೆಯುವ ಪುಣೆ ಹಾಗೂ ಪಿಂಪ್ರಿ ಛಿಂಛ್ವಾಡ ಸ್ಥಳೀಯ ಸಂಸ್ಥೆ ಚುನಾವಣೆಗೆ ಎರಡೂ ಪಕ್ಷಗಳು ಕೈಜೋಡಿಸಿವೆ.
ಚುನಾವಣಾ ಪ್ರಚಾರದಲ್ಲಿ ಈವರೆಗೂ ದೂರ ಉಳಿದಿದ್ದ ಸುಳೆ ಹಾಗೂ ಎನ್‌ಸಿಪಿ (ಎಸ್‌ಪಿ)ಯ ನಾಯಕರು ಈ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ.
ಸಭೆಯಲ್ಲಿ ಮಾತನಾಡಿದ ಅಜಿತ್ ಪವಾರ್, ‘ನಮ್ಮ ಪ್ರಣಾಳಿಕೆಯು ಪುಣೆಯ ಪ್ರಮುಖ ನಾಗರಿಕ ಸಮಸ್ಯೆಗಳ ಮೇಲೆ ಕೇಂದ್ರೀಕೃತವಾಗಿದೆ’ ಎಂದು ಹೇಳಿದ್ದಾರೆ. ಕುಡಿಯುವ ನೀರು ಸರಬರಾಜು, ಸಂಚಾರ ದಟ್ಟಣೆ ನಿಯಂತ್ರಣ, ಗುಂಡಿ ರಹಿತ ರಸ್ತೆಗಳು, ಸ್ವಚ್ಛತೆ ಹಾಗೂ ಹೈಟೆಕ್ ಆರೋಗ್ಯ ಸೇವೆಗಳು, ಮಾಲಿನ್ಯ ನಿಯಂತ್ರಣ ಹಾಗೂ ಕೊಳೆಗೇರಿ ಪುನರ್ವಸತಿ ಮುಂತಾದ ಆಶ್ವಾಸನೆಗಳನ್ನು ಹೊಂದಿದೆ.
ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಜೊತೆ ಅಧಿಕಾರ ಹಂಚಿಕೊಂಡಿದ್ದರೂ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ನಾಯಕತ್ವವನ್ನು ಗುರಿಯಾಗಿಸಿಕೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದರೂ, ಪುಣೆ ಹಾಗೂ ಪಿಂಪ್ರಿ ಛಿಂಛ್ವಾಡ ಅಭಿವೃದ್ಧಿಗೆ ಅಗತ್ಯ ಹಣಕಾಸಿನ ನೆರವು ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.