ADVERTISEMENT

ಮಹಾರಾಷ್ಟ್ರ | ಸರಪಂಚ್ ಹತ್ಯೆ ಪ್ರಕರಣ: ಸಚಿವ ಸ್ಥಾನಕ್ಕೆ ಧನಂಜಯ ಮುಂಡೆ ರಾಜೀನಾಮೆ

ಪಿಟಿಐ
Published 4 ಮಾರ್ಚ್ 2025, 5:52 IST
Last Updated 4 ಮಾರ್ಚ್ 2025, 5:52 IST
<div class="paragraphs"><p>ಧನಂಜಯ ಮುಂಡೆ</p></div>

ಧನಂಜಯ ಮುಂಡೆ

   

ಮುಂಬೈ (ಪಿಟಿಐ): ಬೀಡ್ ಜಿಲ್ಲೆಯಲ್ಲಿ ನಡೆದಿದ್ದ ಸರಪಂಚ್ ಒಬ್ಬರ ಕೊಲೆ ಪ್ರಕರಣದ ಸೂತ್ರಧಾರ ಆಹಾರ ಸಚಿವ ಧನಂಜಯ ಮುಂಡೆ ಅವರ ಪರಮಾಪ್ತ ವಾಲ್ಮೀಕ್‌ ಕರಾಡ್ ಎಂಬುದು ಪೊಲೀಸ್‌ ತನಿಖೆಯಲ್ಲಿ ಬಯಲಾದ ಕಾರಣ, ಮುಂಡೆ ಅವರು ಮಂಗಳವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

‘ಸಚಿವರ ರಾಜೀನಾಮೆ ಪತ್ರ ಸ್ವೀಕರಿಸಿದ್ದು, ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದ್ದೇನೆ’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸುದ್ದಿಗಾರರಿಗೆ ದೃಢಪಡಿಸಿದರು. ಸರಪಂಚ್ ಕೊಲೆ ಕೃತ್ಯಕ್ಕೆ ಸಂಬಂಧಿಸಿದಂತೆ ಮುಂಡೆ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ವಿರೋಧಪಕ್ಷಗಳೂ ಆಗ್ರಹಿಸಿದ್ದವು.

ADVERTISEMENT

ರಾಜೀನಾಮೆಗೆ ಪೂರ್ವದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಸೋಮವಾರ ರಾತ್ರಿ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಮತ್ತು ಮುಂಡೆ ಅವರ ಜೊತೆಗೂ ಚರ್ಚಿಸಿದ್ದರು.

ಬೀಡ್‌ ಜಿಲ್ಲೆಯ ಮಸಾಜೋಗ್‌ ಗ್ರಾಮದ ಸರಪಂಚ್ ಆಗಿದ್ದ ಸಂತೋಷ್ ದೇಶಮುಖ್ ಅವರ ಕೊಲೆಗೆ ಸಂಬಂಧಿಸಿದ ಫೋಟೊಗಳು ಹಾಗೂ ಕೋರ್ಟ್‌ಗೆ ಸಲ್ಲಿಸಿದ್ದ ಆರೋಪಪಟ್ಟಿಯ ವಿವರಗಳು ಬಯಲಾದ ನಂತರ ಸಚಿವರ ರಾಜೀನಾಮೆಗೆ ಒತ್ತಾಯ ಕೇಳಿಬಂದಿತ್ತು. 

ದೇಶಮುಖ್ ಅವರನ್ನು ಕಳೆದ ವರ್ಷ ಡಿ.9ರಂದು ಅಪಹರಿಸಿ, ಕಿರುಕುಳ ನೀಡಿ ಕೊಲೆ ಮಾಡಲಾಗಿತ್ತು. ಇಂಧನ ಕಂಪನಿಯೊಂದರಿಂದ ಹಣ ಸುಲಿಗೆ ಮಾಡುತ್ತಿದ್ದುದನ್ನು ತಡೆಯಲು ಸರಪಂಚ್ ಯತ್ನಿಸಿದ್ದೇ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. 3 ಪ್ರಕರಣಗಳ ಕುರಿತು ಪೊಲೀಸರು ಫೆ. 27ರಂದು 1,200 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದರು.

ಸರಪಂಚ್‌ ಕೊಲೆ, ಹಣ ಸುಲಿಗೆಗೆ ಯತ್ನ ಮತ್ತು ಇಂಧನ ಕಂಪನಿಯ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆಗೆ ಸಂಬಂಧಿಸಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಮಹಾರಾಷ್ಟ್ರ ಸಂಘಟಿತ ಅಪರಾಧ ತಡೆ ಕಾಯ್ದೆ (ಎಂ–ಕೋಕಾ) ಅನ್ವಯವೂ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.

ಸಚಿವರ ಪರಮಾಪ್ತ ವಾಲ್ಮೀಕ್ ಹಾಗೂ ಇತರೆ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಈಗಾಗಲೇ ಅರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ತಲೆಮರೆಸಿಕೊಂಡಿದ್ದಾನೆ.

‘84 ದಿನ ಏಕೆ ಬೇಕಾಯಿತು?’

ಪುಣೆ: ‘ಕೊಲೆ ಕೃತ್ಯದ ಫೋಟೊ ದಾಖಲೆಗಳು ಸರ್ಕಾರದ ಬಳಿ ಇದ್ದರೂ ಸಚಿವರ ರಾಜೀನಾಮೆಗೆ 84 ದಿನ ಏಕೆ ಬೇಕಾಯಿತು’ ಎಂದು ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ ಪ್ರಶ್ನಿಸಿದ್ದಾರೆ. ಇಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಸಂಸದೆಯೂ ಆಗಿರುವ ಸುಳೆ ‘ಕೊಲೆ ಕೃತ್ಯದ ಫೋಟೊಗಳನ್ನು ನಾವುಗಳು ನೋಡುವ ಮೊದಲೇ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ನೋಡಿರಬಹುದು. ನೋಡಿದ್ದಲ್ಲಿ ರಾಜೀನಾಮೆ ಪಡೆಯಲು 84 ದಿನ ಏಕೆ ತೆಗೆದುಕೊಂಡರು’ ಎಂದು ಪ್ರಶ್ನಿಸಿದರು. ಕೃತ್ಯ ಕುರಿತಂತೆ ಪಾರದರ್ಶಕವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಅವರು ಈ ಕುರಿತು ಚರ್ಚಿಸಲು ಹಲವು ದಿನಗಳಿಂದ ಸಿ.ಎಂ ಭೇಟಿಗೆ ಸಮಯ ಕೇಳುತ್ತಿದ್ದೇನೆ ಸಿಗುತ್ತಿಲ್ಲ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.