ADVERTISEMENT

ಪವಾರ್‌ಗೆ ಜೀವ ಬೆದರಿಕೆ: ಶಾಂತಿ ಕಾಪಾಡಲು ಕಾರ್ಯಕರ್ತರಿಗೆ ಎನ್‌ಸಿಪಿ ಮನವಿ

ಮುಂಬೈ ಪೊಲೀಸ್‌ ಮುಖ್ಯಸ್ಥರಿಗೆ ದೂರು ನೀಡಿದ ಸಂಸದೆ ಸುಳೆ ನೇತೃತ್ವದ ನಿಯೋಗ

ಪಿಟಿಐ
Published 9 ಜೂನ್ 2023, 10:28 IST
Last Updated 9 ಜೂನ್ 2023, 10:28 IST
ಶರದ್ ಪವಾರ್
ಶರದ್ ಪವಾರ್   

ಮುಂಬೈ (ಪಿಟಿಐ): ಪಕ್ಷದ ವರಿಷ್ಠ ಶರದ್‌ ಪವಾರ್‌ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಎನ್‌ಸಿಪಿ ಶುಕ್ರವಾರ ಹೇಳಿದ್ದು, ಶಾಂತಿ ಕಾಪಾಡುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದೆ.

‘ಪಕ್ಷದ ವರಿಷ್ಠ ಪವಾರ್‌ ಅವರಿಗೆ ಜೀವ ಬೆದರಿಕೆ ಒಡ್ಡಿರುವ ವಿಚಾರ ಹಬ್ಬುತ್ತಿದ್ದಂತೆಯೇ, ಕಾರ್ಯಕರ್ತರು ಆತಂಕಗೊಂಡಿದ್ದಾರೆ. ಅವರ ಸುರಕ್ಷತೆ ಬಗ್ಗೆ ವಿಚಾರಿಸುತ್ತಿದ್ದಾರೆ. ಹೀಗಾಗಿ, ಎಲ್ಲರೂ ಶಾಂತಿಯಿಂದ ಇರುವಂತೆ ಕಾರ್ಯಕರ್ತರಿಗೆ ಸೂಚಿಸಿದ್ದೇವೆ’ ಎಂದು ಎನ್‌ಸಿಪಿ ವಕ್ತಾರ ಮಹೇಶ್ ತಾಪ್ಸೆ ಹೇಳಿದ್ದಾರೆ.

ಪವಾರ್‌ ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ನೇತೃತ್ವದಲ್ಲಿ ಪಕ್ಷದ ಮುಖಂಡರ ನಿಯೋಗವೊಂದು ಮುಂಬೈ ಪೊಲೀಸ್‌ ಮುಖ್ಯಸ್ಥ ವಿವೇಕ್‌ ಫಣಸಾಲ್ಕರ್ ಅವರನ್ನು ಭೇಟಿ ಮಾಡಿ, ಈ ವಿಚಾರವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ADVERTISEMENT

‘ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಅವರಿಗಾದ ಗತಿಯೇ ನಿಮಗೂ ಶೀಘ್ರವೇ ಬಂದೊದಗುತ್ತದೆ ಎಂಬುದಾಗಿ 82 ವರ್ಷದ ಪವಾರ್‌ ಅವರಿಗೆ ಬೆದರಿಕೆ ಒಡ್ಡಲಾಗಿದೆ’ ಎಂದು ನಿಯೋಗವು ದೂರಿನಲ್ಲಿ ತಿಳಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿರುವ ಈ ಬೆದರಿಕೆ ಸಂದೇಶದ ‘ಸ್ಕ್ರೀನ್‌ ಶಾಟ್‌’ಗಳ ಮುದ್ರಿತ ಪ್ರತಿಗಳನ್ನು ಸುಳೆ ಅವರು ಪೊಲೀಸರಿಗೆ ಸಲ್ಲಿಸಿದ್ದಾರೆ.

ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಅವರಿಗೆ ಜೀವ ಬೆದರಿಕೆ ಒಡ್ಡಿರುವುದಕ್ಕೆ ಸಂಬಂಧಿಸಿ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಮುಂಬೈ ಪೊಲೀಸರಿಗೆ ಶುಕ್ರವಾರ ದೂರು ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು –ಪಿಟಿಐ ಚಿತ್ರ

ಈ ಕುರಿತು ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸ್‌ ಮುಖ್ಯಸ್ಥ ಫಣಸಾಲ್ಕರ್, ‘ಈ ವಿಷಯ ಕುರಿತು ತನಿಖೆ ಆರಂಭಿಸಿದ್ದೇವೆ’ ಎಂದಿದ್ದಾರೆ.

ಮೂಢನಂಬಿಕೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ದಾಭೋಲ್ಕರ್ ಅವರನ್ನು 2013ರ ಆಗಸ್ಟ್‌ 20ರಂದು ಪುಣೆಯಲ್ಲಿ ಹತ್ಯೆ ಮಾಡಲಾಗಿತ್ತು. ಅವರು ಬೆಳಗಿನ ವಾಯುವಿಹಾರಕ್ಕೆ ಹೋಗಿದ್ದಾಗ, ಬೈಕ್‌ನಲ್ಲಿ ಬಂದಿದ್ದ ಇಬ್ಬರು ಹಂತಕರು ಗುಂಡಿಕ್ಕಿದ್ದರು.

‘ಬಿಜೆಪಿ ಬೆಂಬಲಿಗ’: ‘ಸೌರವ್ ಪಿಂಪಲ್ಕರ್ ಎಂಬ ವ್ಯಕ್ತಿ ಈ ಜೀವ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಈ ವ್ಯಕ್ತಿ ಬಿಜೆಪಿ ಬೆಂಬಲಿಗ ಎಂಬುದು ಆತನ ಸಾಮಾಜಿಕ ಮಾಧ್ಯಮದ ವ್ಯಕ್ತಿಗತ ವಿವರಗಳಿಂದ (ಪ್ರೊಫೈಲ್) ತಿಳಿದು ಬರುತ್ತದೆ’ ಎಂದು ಎನ್‌ಸಿಪಿಯ ಹಿರಿಯ ನಾಯಕ ಅಜಿತ್‌ ಪವಾರ್ ಹೇಳಿದ್ದಾರೆ.

‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಯಾವುದೇ ಸೈದ್ಧಾಂತಿಕ ಸಂಘರ್ಷವು ಗೌರವಯುತವಾಗಿ ನಡೆಯಬೇಕು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.