ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನಾ ವರಿಷ್ಠ ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧದ ಹೋರಾಟದಲ್ಲಿ ರಾಷ್ಟ್ರಮಟ್ಟದಲ್ಲಿ ಜಾತ್ಯತೀತ ರಂಗದೊಂದಿಗೆ ಕೈಜೋಡಿಸಬೇಕು ಎಂದು ಎನ್‌ಸಿಪಿ ಆಹ್ವಾನಿಸಿದೆ. ಎನ್‌ಸಿಪಿಯು ಸದ್ಯ ಮಹಾರಾಷ್ಟ್ರದಲ್ಲಿ ಶಿವಸೇನಾ ಮಿತ್ರಪಕ್ಷವಾಗಿದೆ.
ಬಿಜೆಪಿ ಜತೆಗಿನ ಮೈತ್ರಿಯಿಂದ ಶಿವಸೇನಾ 25 ವರ್ಷಗಳನ್ನು ವ್ಯರ್ಥ ಮಾಡಿದೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಬೆನ್ನಲ್ಲೇ ಎನ್‌ಸಿಪಿಯಿಂದ ಈ ಆಹ್ವಾನ ಬಂದಿದೆ.
‘ಹಿಂದುತ್ವ’ವನ್ನು ಧಾರ್ಮಿಕ ತಾರತಮ್ಯವಿಲ್ಲದ ಜೀವನ ವಿಧಾನವೆಂದು ಮಹಾರಾಷ್ಟ್ರ ಮುಖ್ಯಮಂತ್ರಿಗಳು ನಂಬಿದ್ದೇ ಆದಲ್ಲಿ ಮತ್ತು ‘ಧರ್ಮ ಸಂಸದ್’ ಘೋಷಣೆಗಳನ್ನು ಒಪ್ಪದೇ ಇದ್ದಲ್ಲಿ ಅವರನ್ನು ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಜಾತ್ಯತೀತ ಒಕ್ಕೂಟಕ್ಕೆ ಆಹ್ವಾನಿಸುತ್ತೇವೆ ಎಂದು ಎನ್‌ಸಿಪಿ ನಾಯಕ ಮಜೀದ್ ಮೆಮೊನ್ ಹೇಳಿದ್ದಾರೆ.
‘ತಮ್ಮ ಧರ್ಮದ ಬಗ್ಗೆ ಹೆಮ್ಮೆಪಡುವುದು ಒಳ್ಳೆಯದೇ. ಆದರೆ ಇತರರ ಬಗ್ಗೆ ದ್ವೇಷ ಹೊಂದಬಾರದು’ ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟದ ‘ಮಹಾ ವಿಕಾಸ್ ಅಘಾಡಿ’ಯಲ್ಲಿ ಶಿವಸೇನಾ, ಕಾಂಗ್ರೆಸ್ ಹಾಗೂ ಎನ್‌ಸಿಪಿ ಇವೆ. ಆದರೆ, ಗೋವಾದಲ್ಲಿ ಕಾಂಗ್ರೆಸ್ ಅಸಮ್ಮತಿಯಿಂದಾಗಿ ಇದೇ ಮೈತ್ರಿಯೊಂದಿಗೆ ಚುನಾವಣೆ ಎದುರಿಸಲು ಆ ಪಕ್ಷಗಳಿಗೆ ಸಾಧ್ಯವಾಗುತ್ತಿಲ್ಲ. ಆದಾಗ್ಯೂ, ರಾಷ್ಟ್ರಮಟ್ಟದಲ್ಲಿ ಬಿಜೆಪಿ ಎದುರಿಸಲು ಶಿವಸೇನಾಗೆ ಎನ್‌ಸಿಪಿ ಕರೆ ನೀಡಿರುವುದು ಮಹತ್ವದ ನಡೆಯಾಗಿದೆ. ಆದರೆ, ಈ ವಿಚಾರದಲ್ಲಿ ನಿರ್ಧಾರಕ್ಕೆ ಬರುವುದು ಕಾಂಗ್ರೆಸ್‌ಗೆ ಕಷ್ಟವಾಗಬಹುದು. ಶಿವಸೇನಾದ ಹಿಂದಿನ ಸೈದ್ಧಾಂತಿಕ ನಿಲುವಿನ ಬಗ್ಗೆ ಸ್ಪಷ್ಟನೆ ನೀಡುವುದು ಕಾಂಗ್ರೆಸ್‌ಗೆ ಕಷ್ಟವಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
‘ಶಿವಸೇನಾವು ಸ್ವತಂತ್ರವಾಗಿ ಚುನಾವಣೆ ಎದುರಿಸಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲನ್ನು ಸ್ವೀಕರಿಸಿದ್ದೇನೆ. ಮಹಾರಾಷ್ಟ್ರದ ಹೊರಗೂ ಪಕ್ಷವನ್ನು ವಿಸ್ತರಿಸಿ ದೇಶ ರಾಜಕಾರಣದಲ್ಲೂ ಪ್ರಮುಖ ಪಾತ್ರ ವಹಿಸುತ್ತೇವೆ. ಬಿಜೆಪಿ ಜತೆಗಿನ ಮೈತ್ರಿಯಿಂದ ಶಿವಸೇನಾ 25 ವರ್ಷಗಳನ್ನು ವ್ಯರ್ಥ ಮಾಡಿದೆ ಎಂದು ನಾನು ಈಗಲೂ ನಂಬಿದ್ದೇನೆ’ ಎಂದು ಉದ್ಧವ್ ಠಾಕ್ರೆ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.