ಕರ್ನಲ್ ಸೋಫಿಯಾ ಖುರೇಷಿ
–ಪಿಟಿಐ ಚಿತ್ರ
ನವದೆಹಲಿ: ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು ನೀಡಿರುವ ಅವಹೇಳನಕಾರಿ ಹೇಳಿಕೆಗಳು ಸ್ವೀಕಾರಾರ್ಹವಲ್ಲ. ಸಮವಸ್ತ್ರದಲ್ಲಿರುವ ಮಹಿಳೆಯರಿಗೆ ಪ್ರತಿಯೊಬ್ಬರು ಗೌರವ ನೀಡಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗ ಅಧ್ಯಕ್ಷೆ ವಿಜಯಾ ರಹತ್ಕರ್ ಒತ್ತಾಯಿಸಿದ್ದಾರೆ.
‘ಯಾರು ನಮ್ಮ ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದರೊ... ಅವರಿಗೆ ತಕ್ಕ ಪಾಠ ಕಲಿಸಲು ಅವರ ಸಹೋದರಿಯನ್ನೇ ಕಳುಹಿಸಿದೆವು’ ಎಂದು ಕರ್ನಲ್ ಸೋಫಿಯಾ ಖುರೇಷಿ ಅವರ ಕುರಿತು ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನೀಡಿರುವ ಹೇಳಿಕೆಯು ವಿವಾದ ಸೃಷ್ಟಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಶಾ ಮಾತನಾಡಿರುವ ಈ ವಿಡಿಯೊವನ್ನು ಭಾರಿ ಸಂಖ್ಯೆಯಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ವಿಜಯ್ ಅವರ ವಿರುದ್ಧ ಸಾರ್ವಜನಿಕರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವಿಚಾರವಾಗಿ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿಜಯಾ ರಹತ್ಕರ್, ‘ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಲವು ವ್ಯಕ್ತಿಗಳು ಮಹಿಳೆಯರ ಬಗ್ಗೆ ಅವಹೇಳನಕಾರಿ ಮತ್ತು ಸ್ವೀಕಾರಾರ್ಹವಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಇದು ನಮ್ಮ ಸಮಾಜದಲ್ಲಿ ಮಹಿಳೆಯರ ಘನತೆಗೆ ಧಕ್ಕೆ ತರುವುದಲ್ಲದೆ, ದೇಶದ ರಕ್ಷಣಾ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಹೆಣ್ಣುಮಕ್ಕಳಿಗೆ ಮಾಡಿದ ಅವಮಾನವಾಗಿದೆ’ ಎಂದು ವಿಜಯಾ ರಹತ್ಕರ್ ಆಕ್ರೋಶ ಹೊರಹಾಕಿದ್ದಾರೆ.
‘ಪ್ರೀತಿಯ ಕರ್ನಲ್ ಸೋಫಿಯಾ ಖುರೇಷಿ ಈ ರಾಷ್ಟ್ರದ ಹೆಮ್ಮೆಯ ಮಗಳು. ದೇಶವನ್ನು ಪ್ರೀತಿಸುವ, ಧೈರ್ಯ ಮತ್ತು ಕರ್ತವ್ಯನಿಷ್ಠೆಯಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಎಲ್ಲಾ ಭಾರತೀಯರ ಸಹೋದರಿ. ಅವರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ನಾಯಕತ್ವದ ಸಾಮರ್ಥ್ಯವನ್ನು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕರ್ನಲ್ ಸೋಫಿಯಾ ಅವರಂತಹ ಧೈರ್ಯಶಾಲಿ ಮಹಿಳೆಯರ ಬಗ್ಗೆ ಇಡೀ ದೇಶವೇ ಹೆಮ್ಮೆಪಡುತ್ತದೆ. ಅವರ ಬಗೆಗಿನ ಇಂತಹ ಅವಹೇಳನಕಾರಿ ಹೇಳಿಕೆಗಳನ್ನು ಬಲವಾಗಿ ಖಂಡಿಸಬೇಕು’ ಎಂದು ರಹತ್ಕರ್ ತಿಳಿಸಿದ್ದಾರೆ.
ಇತ್ತೀಚಿನ ಸಿಬಿಎಸ್ಇ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಹೆಣ್ಣು ಮಕ್ಕಳು ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಪ್ರಗತಿಪರ ರಾಷ್ಟ್ರದ ದಿಕ್ಕಿನಲ್ಲಿ ಸಾಗಲು, ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ಮುನ್ನಡೆ ಸಾಧಿಸುವುದು ಅಗತ್ಯ ಎಂದು ಅವರು ರಹತ್ಕರ್ ಹೇಳಿದ್ದಾರೆ.
‘ಸಾರ್ವಜನಿಕ ಜೀವನದಲ್ಲಿರುವವರು ಮಹಿಳೆಯರ ಬಗ್ಗೆ ಗೌರವಯುತ ಭಾಷೆ ಮತ್ತು ಮನೋಭಾವವನ್ನು ಅಳವಡಿಸಿಕೊಳ್ಳುವುದು ಮುಖ್ಯ. ಮಹಿಳೆಯರ ಭಾಗವಹಿಸುವಿಕೆ ಮತ್ತು ಅವರ ಕೊಡುಗೆಯನ್ನು ಕಡಿಮೆ ಅಂದಾಜು ಮಾಡುವುದು ಸ್ವೀಕಾರಾರ್ಹವಲ್ಲ. ಇದು ದೇಶದ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ’ ಎಂದು ರಹತ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ವಿಜಯ್ ಶಾ ಅವರು ಮಾತನಾಡಿರುವ ವಿಡಿಯೊವನ್ನು ಕಾಂಗ್ರೆಸ್ ಕೂಡ ಹಂಚಿಕೊಂಡಿದ್ದು ತೀವ್ರವಾಗಿ ಟೀಕಿಸಿದೆ.
‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಮನಃಸ್ಥಿತಿಯು ಎಂದಿಗೂ ಮಹಿಳಾ ವಿರೋಧಿಯೇ ಆಗಿರುತ್ತದೆ. ಉಗ್ರರ ಗುಂಡಿಗೆ ಬಲಿಯಾದ ನೌಕಾಪಡೆಯ ಅಧಿಕಾರಿಯ ಪತ್ನಿಯನ್ನು ಮೊದಲಿಗೆ ಟ್ರೋಲ್ ಮಾಡಲಾಯಿತು. ನಂತರ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಅವರ ಮಗಳನ್ನು ಅವಮಾನಿಸಲಾಯಿತು. ಈಗ ಕರ್ನಲ್ ಸೋಫಿಯಾ ಖುರೇಷಿ ಅವರ ಕುರಿತು ಬಿಜೆಪಿ ಸಚಿವರು ಕೀಳುಮಟ್ಟದಲ್ಲಿ ಮಾತನಾಡುತ್ತಿದ್ದಾರೆ. ಇಂಥ ಸಚಿವನನ್ನು ಪ್ರಧಾನಿ ಮೋದಿ ಅವರು ತಕ್ಷಣವೇ ಅಮಾನತು ಮಾಡಬೇಕು’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.