ನವದೆಹಲಿ: ಎನ್‌ಡಿಎ ಸರ್ಕಾರವು ಬಡವರಿಂದ ಕಸಿದುಕೊಂಡು ಶ್ರೀಮಂತರಿಗೆ ನೀಡುವ ಕಲೆಯನ್ನು ಕರಗತ ಮಾಡಿಕೊಂಡಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ.
ಇಂದು (ಶುಕ್ರವಾರ) ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಬ್ಯಾನರ್ಜಿ, ಕೇಂದ್ರ ಸರ್ಕಾರವು ಆರ್ಥಿಕ ನ್ಯಾಯದಲ್ಲಿ ನಂಬಿಕೆ ಹೊಂದಿಲ್ಲ, ಬದಲಿಗೆ ಆರ್ಥಿಕ ಪಕ್ಷಪಾತದಲ್ಲಿ ನಂಬಿಕೆ ಹೊಂದಿದೆ ಎಂದು ಹೇಳಿದ್ದಾರೆ.
‘ಎನ್‌ಡಿಎ ಸರ್ಕಾರದಲ್ಲಿ ಒಂದು ಮಾದರಿ ಇದೆ. ಅದರನ್ವಯ ಸರ್ಕಾರವು ಬಡವರಿಂದ ಕಸಿದುಕೊಂಡು ಶ್ರೀಮಂತರಿಗೆ ನೀಡುವ ಕಲೆಯನ್ನು ಕರಗತ ಮಾಡಿಕೊಂಡಿದೆ. ಬಡ ರೈತರು ಸಾಲಬಾಧೆಯಿಂದ ಬಳಲುತ್ತಿರುವಾಗ ಕಾರ್ಪೊರೇಟ್ ಸಾಲಗಳನ್ನು ಮನ್ನಾ ಮಾಡುವುದು ಇದಕ್ಕೆ ಒಂದು ಉದಾಹರಣೆಯಾಗಿದೆ’ ಎಂದು ಅಭಿಷೇಕ್ ವಾಗ್ದಾಳಿ ನಡೆಸಿದ್ದಾರೆ.
‘ಅಗತ್ಯ ವಸ್ತುಗಳ ಮೇಲಿನ ಸಬ್ಸಿಡಿಗಳನ್ನು ಹೆಚ್ಚಿಸಲು ಹಣವಿಲ್ಲ ಎಂದು ಸರ್ಕಾರ ಹೇಳಿಕೊಳ್ಳುತ್ತದೆ. ಆದರೆ, ಕಾರ್ಪೊರೇಟ್ ತೆರಿಗೆ ದರಗಳನ್ನು ಕಡಿತಗೊಳಿಸುತ್ತದೆ. ಇದರಿಂದಾಗಿ ಕೋಟ್ಯಧಿಪತಿಗಳಿಗೆ ಹೆಚ್ಚಿನ ಲಾಭವಾಗುತ್ತದೆ. ಇದು ಆರ್ಥಿಕ ನ್ಯಾಯವಲ್ಲ, ಅತ್ಯಂತ ಕೆಟ್ಟ ಆರ್ಥಿಕ ಪಕ್ಷಪಾತವಾಗಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.