ನವದೆಹಲಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಶೀಘ್ರವೇ ಹಲವು ಶ್ವಾನಗಳನ್ನು ಸೇವೆಗೆ ಸೇರಿಸಿಕೊಳ್ಳಲಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಶ್ವಾನಗಳು ಮೃತದೇಹಗಳನ್ನು ಪತ್ತೆ ಮಾಡುವಲ್ಲಿ ಸಹಾಯಕವಾಗಲಿವೆ ಎಂದು ಎನ್‌ಡಿಆರ್‌ಎಫ್ ತಿಳಿಸಿದೆ.
ಇಷ್ಟು ವರ್ಷಗಳಿಂದ ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೀವಗಳನ್ನು ಉಳಿಸುವುದನ್ನು ಎನ್‌ಡಿಆರ್‌ಎಫ್ ತನ್ನ ಆದ್ಯ ಕರ್ತವ್ಯವನ್ನಾಗಿ ಅದರ ಮೇಲೆ ಹೆಚ್ಚು ಕೇಂದ್ರೀಕರಿಸಿತ್ತು. ಆದರೆ ಮೃತರ ಅಂತ್ಯಕ್ರಿಯೆ ನೆರವೇರಿಸಲು ಅವರ ಪ್ರೀತಿಪಾತ್ರರಿಗಾಗಿ ಶವಗಳನ್ನು ಹುಡುಕುವುದೂ ಮುಖ್ಯವಾಗಿದೆ ಎಂದು ಹೇಳಿದೆ.
ಹೀಗಾಗಿ ಭೂಕುಸಿತ, ರೈಲ್ವೆ ಅಥವಾ ರಸ್ತೆ ಅಪಘಾತ ಸೇರಿದಂತೆ ಯಾವುದೇ ಸಂದರ್ಭದಲ್ಲಿ ಅವಶೇಷಗಳಡಿಯಲ್ಲಿ ಮೃತದೇಹಗಳನ್ನು ಪತ್ತೆ ಹಚ್ಚಲು ಕೆಲವು ತಿಂಗಳಿನಿಂದ ಶ್ವಾನಗಳಿಗೆ ತರಬೇತಿ ನೀಡುತ್ತಿದ್ದು, ಶೀಘ್ರವೇ ಅವು ಕರ್ತವ್ಯದಲ್ಲಿ ಭಾಗಿಯಾಗಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ರಾಜ್ಯ ರಕ್ಷಣಾ ಪಡೆಗಳಲ್ಲಿ ಶ್ವಾನಗಳನ್ನು ಕಾರ್ಯಾಚರಣೆಗೆ ಬಳಸುವುದು ವಿರಳವಾಗಿದೆ. ಶ್ವಾನ ಪಡೆ ಹೊಂದಿರುವ ತಂಡವು ಕಾರ್ಯಾಚರಣೆಯಲ್ಲಿ ಮಿಶ್ರ ಯಶಸ್ಸಿನ ಪ್ರಮಾಣವನ್ನು ಹೊಂದಿವೆ. ಆದರೆ ಇದು ಬಹಳಷ್ಟು ಅಂಶಗಳ ಮೇಲೆ ನಿರ್ಧರಿತವಾಗಿರುತ್ತದೆ. ಏಕೆಂದರೆ ಮೃತದೇಹಗಳನ್ನು ಪತ್ತೆ ಹಚ್ಚುವುದು ಕಷ್ಟಕರ ಎಂದು ಹೇಳಿದರು.
ವರ್ಷದ ಆರಂಭದಲ್ಲಿ ಕೇರಳ ಪೊಲೀಸರು ತರಬೇತಿ ಪಡೆದ ಎರಡು ಶ್ವಾನಗಳನ್ನು ಸೇವೆಗೆ ನಿಯೋಜಿಸಿಕೊಂಡರು. ವಿವಿಧ ಅವಘಡಗಳಲ್ಲಿ ಅವು 8 ಮೃತದೇಹಗಳನ್ನು ಪತ್ತೆ ಹಚ್ಚಲು ಸಹಾಯ ಮಾಡಿದವು. ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದ ಸಂದರ್ಭದಲ್ಲಿಯೂ ಈ ಶ್ವಾನಗಳು ಕರ್ತವ್ಯ ನಿರ್ವಹಿಸಿದ್ದವು.
ಕೆಲ ತಿಂಗಳಿಂದ ತರಬೇತಿ
ತಮಿಳುನಾಡಿನ ಅರಕ್ಕೋಣಂ ಹಾಗೂ ಉತ್ತರ ಪ್ರದೇಶದ ಗಾಜಿಯಾಬಾದ್‌ಗಳಲ್ಲಿರುವ ಎನ್‌ಡಿಆರ್‌ಎಫ್ ತುಕಡಿಯ ನೆಲೆಗಳಲ್ಲಿ 6 ಶ್ವಾನಗಳಿಗೆ ತರಬೇತಿ ನೀಡಲಾಗುತ್ತಿದೆ. ಬೆಲ್ಜಿಯಂ ಮ್ಯಾಲಿನೋಯಿಸ್ ಹಾಗೂ ಲ್ಯಾಬ್ರಡಾರ್ ತಳಿಯ ಶ್ವಾನಗಳನ್ನು ತರಬೇತಿಗೆ ಆಯ್ದುಕೊಳ್ಳಲಾಗಿದೆ. ಕಾರ್ಯಾಚರಣೆ ಕುರಿತು ಶ್ವಾನಗಳಿಗೆ ತರಬೇತಿ ನೀಡುವುದು ಸವಾಲಿನ ಕೆಲಸ. ಇದಕ್ಕಾಗಿ ಮೃತದೇಹ ಮತ್ತು ಮಾನವ ಶರೀರದ ಭಾಗಗಳು ಬೇಕಾಗುತ್ತವೆ. ಹೀಗಾಗಿ ಮಾನವನ ಮೃತದೇಹದಿಂದ ಹೊರಸೂಸುವ ವಾಸನೆಯನ್ನು ಹೋಲುವ ಸುಗಂಧ ಧ್ರವ್ಯವನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದ್ದು ಈ ವಾಸನೆಯನ್ನು ಪತ್ತೆ ಹಚ್ಚಲು ಶ್ವಾನಗಳಿಗೆ ತರಬೇತಿ ನೀಡಲಾಗುತ್ತಿದೆ. ‘ಮುಂದಿನ ತಿಂಗಳ ಒಳಗಾಗಿ ತರಬೇತಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ದೇಶದಲ್ಲಿರುವ 16 ಎನ್‌ಡಿಆರ್‌ಎಫ್ ತುಕಡಿಗಳ ಪೈಕಿ ಕೆಲವೆಡೆ ಅವುಗಳನ್ನು ಕರ್ತವ್ಯಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಶ್ವಾನಗಳನ್ನು ನಿಯೋಜಿಸಿಕೊಂಡ ನಂತರ ಅವುಗಳ ಯಶಸ್ಸಿನ ಪ್ರಮಾಣ ನಮಗೆ ತಿಳಿಯುತ್ತದೆ’ ಎನ್‌ಡಿಆರ್‌ಎಫ್ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.