ADVERTISEMENT

ನೀಟ್ ಪಿಜಿ 2024 | ಹೊಸದಾಗಿ 3ನೇ ಸುತ್ತಿನ ಕೌನ್ಸೆಲಿಂಗ್: ಕೇಂದ್ರಕ್ಕೆ ನೋಟಿಸ್

ಪಿಟಿಐ
Published 4 ಫೆಬ್ರುವರಿ 2025, 13:27 IST
Last Updated 4 ಫೆಬ್ರುವರಿ 2025, 13:27 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ನೀಟ್‌ ಪಿಜಿ -2024ರ ಅಖಿಲ ಭಾರತ ಕೋಟಾದ ಮೂರನೇ ಸುತ್ತಿನ ಸೀಟುಗಳಿಗೆ ಹೊಸದಾಗಿ ಕೌನ್ಸೆಲಿಂಗ್ ನಡೆಸಲು ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ದಾಖಲಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ನೋಟಿಸ್‌ ಜಾರಿಗೆ ಸೂಚಿಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ಕೆ.ವಿನೋದ್ ಚಂದ್ರನ್ ಅವರಿದ್ದ ನ್ಯಾಯಪೀಠವು, ಈ ಕುರಿತ ವಿಚಾರಣೆಯನ್ನು ಫೆಬ್ರುವರಿ 7ಕ್ಕೆ ಮುಂದೂಡಿತು. 

ADVERTISEMENT

ನೀಟ್ ಪಿಜಿ- 2024ರ ಅಖಿಲ ಭಾರತ ಕೋಟಾದ (ಎಐಕ್ಯೂ) ಮೂರನೇ ಸುತ್ತಿನ ಕೌನ್ಸೆಲಿಂಗ್‌ಗೆ ಅರ್ಹರಾಗಿದ್ದ ಅರ್ಜಿದಾರರು, ಕೆಲವು ರಾಜ್ಯಗಳಲ್ಲಿ ಎರಡನೇ ಸುತ್ತಿನ ಕೌನ್ಸೆಲಿಂಗ್ ಮುಗಿಯುವ ಮೊದಲೇ ಮೂರನೇ ಸುತ್ತಿನ ಕೌನ್ಸೆಲಿಂಗ್ ಆರಂಭವಾಗಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಅರ್ಜಿದಾರರ ಪರ ವಕೀಲರಾದ ತಾನ್ವಿ ದುಬೆ, ಎಐಕ್ಯೂ ಮತ್ತು ರಾಜ್ಯ ಕೋಟಾ ಸೀಟುಗಳ ಕೌನ್ಸೆಲಿಂಗ್ ದಿನಾಂಕದ ಗೊಂದಲದಲ್ಲಿ ಅರ್ಜಿದಾರರಿಗೆ ಅನ್ಯಾಯವಾಗಿದೆ.  ರಾಜ್ಯ ಕೋಟಾದ ಅನೇಕ ವಿದ್ಯಾರ್ಥಿಗಳಿಗೆ 3ನೇ ಸುತ್ತಿನಲ್ಲಿ ಅಖಿಲ ಭಾರತ ಕೋಟಾ ಸೀಟು ಬ್ಲಾಕ್‌ ಮಾಡಲು ಆಸ್ಪದವಾಗಿದೆ ಎಂದು ತಿಳಿಸಿದರು.

ರಾಜ್ಯ ಕೋಟಾದ ಕೌನ್ಸೆಲಿಂಗ್‌ನಲ್ಲಿ ವಿದ್ಯಾರ್ಥಿಗಳಿಗೆ ಎರಡರ ಪೈಕಿ ಉತ್ತಮ ಸೀಟು ಆಯ್ಕೆಯ ಅವಕಾಶ ಇತ್ತು. ರಾಜ್ಯ ಕೋಟಾದಡಿ ಉತ್ತಮ ಸೀಟು ಸಿಕ್ಕಲ್ಲಿ, ಕಾಯ್ದಿರಿಸಿದ್ದ ಅಖಿಲ ಭಾರತ ಕೋಟಾ ಸೀಟು ಕೈಬಿಡುವ ಆಯ್ಕೆ ಇತ್ತು. ಇದರಿಂದ ಎಐಕ್ಯೂ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಇಂತಹ ಸಂದರ್ಭದಲ್ಲಿ ಬ್ಲಾಕ್‌ ಮಾಡಲಾಗಿದ್ದ ಎಐಕ್ಯೂ ಸೀಟುಗಳು ಅರ್ಜಿದಾರರಿಗೆ ಆಯ್ಕೆಗೆ ಲಭ್ಯ ಇರಲಿಲ್ಲ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಮೂರನೇ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆ ರದ್ದುಪಡಿಸಿ, ಹೊಸದಾಗಿ ಕೌನ್ಸೆಲಿಂಗ್ ನಡೆಸುವಂತೆ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಗೆ ಸೂಚಿಸಬೇಕು ಎಂದು ಕೋರಿದೆ. ಅಲ್ಲದೆ, ಎಐಕ್ಯೂ ವಿದ್ಯಾರ್ಥಿಗಳಿಗೆ ನೆರವಾಗುವಂತೆ ಬಾಕಿ ಉಳಿದಿರುವ ಸೀಟುಗಳ ಭರ್ತಿಗೆ 4ನೇ ಸುತ್ತಿನ ಕೌನ್ಸೆಲೀಂಗ್ ನಡೆಸಲು ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.