ಪ್ರಾತಿನಿಧಿಕ ಚಿತ್ರ
ಕೃಪೆ: Gemini AI
ನವದೆಹಲಿ: ವಿವಿಧ ವೈದ್ಯಕೀಯ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶ ಅರ್ಹತೆಗಾಗಿ ವೈದ್ಯಕೀಯ ವಿಜ್ಞಾನ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇಎಂಎಸ್) ಭಾನುವಾರ ನಡೆಸಿದ ‘ನೀಟ್–ಪಿಜಿ‘ ಪರೀಕ್ಷೆಗೆ 2.24 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು.
ಎಂ.ಡಿ, ಎಂ.ಎಸ್ ಮತ್ತು ಪಿಜಿ ಡಿಪ್ಲೊಮಾ ಸೇರಿದಂತೆ ಹಲವು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅಭ್ಯರ್ಥಿಗಳು ಪರೀಕ್ಷೆ ಬರೆದರು.
ದೇಶದ 301 ನಗರ ಮತ್ತು 1052 ಪರೀಕ್ಷಾ ಕೇಂದ್ರಗಳಲ್ಲಿ ಒಂದೇ ಪಾಳಿಯಲ್ಲಿ ಕಂಪ್ಯೂಟರ್ ಆಧಾರಿತ ವೇದಿಕೆಯಲ್ಲಿ ಪರೀಕ್ಷೆ ನಡೆಯಿತು. ಒಂದೇ ಪಾಳಿಯಲ್ಲಿ ಕಂಪ್ಯೂಟರ್ ವೇದಿಕೆಯಡಿ ಆಯೋಜಿಸುವ ದೇಶದ ದೊಡ್ಡ ಪರೀಕ್ಷೆ ಇದಾಗಿದೆ.
ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ 2,200ಕ್ಕೂ ಹೆಚ್ಚು ಬೋಧಕ ಸಿಬ್ಬಂದಿಯನ್ನು ಪರೀಕ್ಷಾ ಕರ್ತವ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಬಿಗಿ ಬಂದೋಬಸ್ತ್‌ನಲ್ಲಿ ಪರೀಕ್ಷೆ ಜರುಗಿತು. ಸೈಬರ್ ಅಪರಾಧ ತಡೆಗೆ ಕೇಂದ್ರ ಗೃಹ ಇಲಾಖೆಯ ಸೈಬರ್ ಸಂಯೋಜನಾ ಸಂಸ್ಥೆ ಸಹಕಾರ ಪಡೆಯಲಾಗಿತ್ತು. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಕೇಂದ್ರಗಳಲ್ಲಿ 300ಕ್ಕೂ ಹೆಚ್ಚು ಸೈಬರ್ ಕಮಾಂಡೋಗಳನ್ನು ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳ ಮೇಲೆ ಸಿಸಿಟಿವಿ ಕ್ಯಾಮೆರಾಗಳ ನಿಗಾ ಇಡಲಾಗಿತ್ತು. ಕ್ಷಣ–ಕ್ಷಣದ ಸಿಸಿ ಟಿವಿ ದೃಶ್ಯಗಳನ್ನು ಸ್ವೀಕರಿಸಲು ಎನ್‌ಬಿಇಎಂಎಸ್ ಕಚೇರಿಯಲ್ಲಿ 200 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.