ನವದೆಹಲಿ: ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಟೀಕಿಸಿದ್ದಾರೆ.
‘ನಿಜವಾದ ಅಯೋಧ್ಯೆ ಇರುವುದು ನೇಪಾಳದಲ್ಲಿ. ರಾಮ ನೇಪಾಳದವ’ ಎಂಬ ಒಲಿ ಹೇಳಿಕೆಗೆ ಸಿಂಘ್ವಿ ಈ ರೀತಿ ತಿರುಗೇಟು ನೀಡಿದ್ದಾರೆ.
ಒಲಿ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಸಿಂಘ್ವಿ, ‘ನೇಪಾಳ ಪ್ರಧಾನಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತಿದೆ. ಹತಾಶ ಚೀನಾದ ಕೈಗೊಂಬೆಯಾಗಿರುವಂತಿದೆ ಅಥವಾ ಆ ದೇಶ ಹೇಳಿಕೊಟ್ಟದ್ದನ್ನು ಉಸುರುವ ಗಿಣಿಯಂತಾಗಿದ್ದಾರೆ. ಮೊದಲು ಅವರು ಹಿಂದೆಂದೂ ಚೀನಾ ಪ್ರತಿಪಾದಿಸಿರದ ಭೂಪ್ರದೇಶಗಳು ತಮ್ಮದೆಂದು ಹೇಳಿಕೊಂಡರು. ಈಗ ಅವರು ನೇಪಾಳದಿಂದ ನೂರಾರು ಮೈಲಿ ದೂರದಲ್ಲಿರುವ ಅಯೋಧ್ಯೆಯನ್ನು ಸ್ಥಳಾಂತರಿಸಿದ್ದಾರೆ. ರಾಮ ಸೀತೆಯನ್ನು ಬದಲಾಯಿಸ ಹೊರಟಿದ್ದಾರೆ’ಎಂದು ಉಲ್ಲೇಖಿಸಿದ್ದಾರೆ.
ಭಾರತವು ನಕಲಿ ಅಯೋಧ್ಯೆಯನ್ನು ಸೃಷ್ಟಿಸಿ ಸಾಂಸ್ಕೃತಿಕ ಅತಿಕ್ರಮಣ ಮಾಡುತ್ತಿದೆ ಎಂದು ಒಲಿ ಸೋಮವಾರ ಆರೋಪಿಸಿದ್ದರು. ಬಾಲ್ಮೀಕಿ (ವಾಲ್ಮೀಕಿ) ಆಶ್ರಮ ನೇಪಾಳದಲ್ಲಿದೆ. ಪುತ್ರನನ್ನು ಪಡೆಯಲು ರಾಜ ದಶರಥ ಧಾರ್ಮಿಕ ವಿಧಿಗಳನ್ನು ನೆರವೇರಿಸಿದ್ದು ರಿಧಿಯಲ್ಲಿ. ದಶರಥನ ಮಗ ರಾಮ ಭಾರತೀಯನಲ್ಲ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.