ADVERTISEMENT

ಗಡಿ ವಿಚಾರದಲ್ಲಿ ಭಾರತದಿಂದ ಮೋಸವಾಗಿದೆ: ನೇಪಾಳದ ಪ್ರಧಾನಿ ಆರೋಪ

ಏಜೆನ್ಸೀಸ್
Published 11 ಜೂನ್ 2020, 12:07 IST
Last Updated 11 ಜೂನ್ 2020, 12:07 IST
ಉತ್ತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ನೇಪಾಳದ ಪ್ರಧಾನಿ ಕೆ.ಪಿ.ಶರ್ಮ ಒಲಿ
ಉತ್ತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ನೇಪಾಳದ ಪ್ರಧಾನಿ ಕೆ.ಪಿ.ಶರ್ಮ ಒಲಿ   

ಕಠ್ಮಂಡು: 'ಸುಳ್ಳು ಕಾಳಿ ನದಿಯನ್ನು ತೋರಿಸಿ,ಸೇನೆಯನ್ನು ತಂದಿರಿಸಿ, ಭಾರತವು ನೇಪಾಳಕ್ಕೆ ಮೋಸ ಮಾಡಿದೆ. ನಮಗೆ ಸೇರಿದ ಭೂಪ್ರದೇಶಗಳನ್ನು ತನ್ನದೆಂದು ವಾದಿಸುತ್ತಿದೆ' ಎಂದು ನೇಪಾಳದ ಪ್ರಧಾನಿ ಕೆ.ಪಿ.ಶರ್ಮ ಒಲಿ ಸಂಸತ್ತಿನಲ್ಲಿ ಹೇಳಿದರು.

ಕಾಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ಮತ್ತೆ ನಮ್ಮ ವಶಕ್ಕೆ ಪಡೆದುಕೊಳ್ಳಲು ಕಟಿಬದ್ಧರಾಗಿದ್ದೇವೆ. ಈ ಭೂಪ್ರದೇಶಗಳನ್ನು ಭಾರತವು ಅಕ್ರಮವಾಗಿ ಕಬಳಿಸಿದೆ. ತನ್ನ ಭೂಪಟಗಳಲ್ಲಿ ತೋರಿಸುತ್ತಿದೆ ಎಂದು ನುಡಿದರು.

'ಟಿಬೆಟ್ ಮಾಡಿದ ತಪ್ಪನ್ನು ನೇಪಾಳ ಮಾಡಬಾರದು' ಎಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಹೇಳಿಕೆ ಪ್ರಸ್ತಾಪಿಸಿದ ಒಲಿ, 'ಈ ಹೇಳಿಕೆಯಿಂದ ನೇಪಾಳದ ಸಾರ್ವಭೌಮತೆಗೆ ಧಕ್ಕೆಯಾಗಿದೆ' ಎಂದು ಹೇಳಿದರು.

ADVERTISEMENT

ಸಂಸತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಈ ವಿಚಾರ ಪ್ರಸ್ತಾಪಿಸಿದ ಒಲಿ, 'ಭಾರತವು ಮೋಸದಿಂದ ತನ್ನದೆಂದು ಹೇಳಿಕೊಳ್ಳುತ್ತಿರುವ ಭೂ ಪ್ರದೇಶಗಳನ್ನು ಮರಳಿ ನಮ್ಮ ಸುಪರ್ದಿಗೆ ಪಡೆದುಕೊಳ್ಳಲು ದೃಢ ನಿಶ್ಚಯ ಮಾಡಿದ್ದೇವೆ. ಇಡೀ ದೇಶ ಈ ವಿಚಾರದಲ್ಲಿ ಒಂದಾಗಿದೆ' ಎಂದರು.

ಸಂವಿಧಾನ ತಿದ್ದುಪಡಿ ಕಾಯ್ದೆಯ ಮೂಲಕ ನೇಪಾಳದ ಭೂಪಟ ಪರಿಷ್ಕರಿಸುವ ಪ್ರಸ್ತಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳು ಬೆಂಬಲಿವೆ. ವಿರೋಧ ವ್ಯಕ್ತಪಡಿಸಿದ್ದ ಸರಿತಾ ಗಿರಿ ಅವರಿಗೆ ಮಾಧೆಸ್‌ ಸೆಂಟ್ರಿಕ್ ಸಮಾಜವಾದಿ ಪಕ್ಷವು ಶಿಸ್ತುಕ್ರಮದ ಎಚ್ಚರಿಕೆ ನೀಡಿದ್ದು, ಕಾಯ್ದೆಯನ್ನು ಬೆಂಬಲಿಸುವಂತೆ ಸೂಚಿಸಿದೆ.

ಗಡಿಯಲ್ಲಿ ಭಾರತವು ನಿರ್ಮಿಸುತ್ತಿರುವ ಜಲಾಶಯದಿಂದ ನೇಪಾಳದ ಭೂಮಿ ಮುಳುಗಲಿದೆ. 'ಕಾನೂನಿನ ಪ್ರಕಾರ ಮತ್ತು ಸೌಹಾರ್ದತೆ ಬಯಸುವ ನೆರೆಯವರಾಗಿ ನೀವು ಈ ಕೆಲಸ ಮಾಡುವಂತಿಲ್ಲ. ಈ ಬಗ್ಗೆ ಭಾರತಕ್ಕೆ ನಾವು ಹಲವು ಬಾರಿ ಎಚ್ಚರಿಕೆ ಹೇಳಿದ್ದೆವು. ಮುಂದಿನ ದಿನಗಳಲ್ಲಿ ಇಂಥ ನಡವಳಕೆಯನ್ನು ಸಹಿಸಲು ಆಗುವುದಿಲ್ಲ' ಎಂದು ನೇಪಾಳ ಸಂಸತ್ತಿನಲ್ಲಿ ಒಲಿ ಹೇಳಿಕೆ ನೀಡಿದರು.

'ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆಗಳು ಯಥಾವತ್ತಾಗಿ ವರದಿಯಾಗಿದೆ ಎಂದಾದರೆ, ಅದು ನೇಪಾಳದ ಸಾರ್ವಭೌಮತೆಯನ್ನು ಪ್ರಶ್ನಿಸುವಂತಿದೆ ಮತ್ತು ಖಂಡನಾರ್ಹವಾಗಿವೆ' ಎಂದು ನುಡಿದರು.

ನೇಪಾಳದ ಬಗ್ಗೆ ಯೋಗಿ ಆದಿತ್ಯನಾಥ್ ಅವರ ಹೇಳಿಕೆಯನ್ನು ಸುದ್ದಿಸಂಸ್ಥೆಗಳು ಜೂನ್ 3ರಂದು ವರದಿ ಮಾಡಿದ್ದವು. 'ಟಿಬೆಟ್ ಮಾಡಿದ ತಪ್ಪನ್ನು ನೇಪಾಳ ಮಾಡಬಾರದು. ಭಾರತ ಮತ್ತು ನೇಪಾಳಗಳು ಎರಡು ಪ್ರತ್ಯೇಕ ದೇಶಗಳೇ ಆಗಿರಬಹುದು, ಆದರೆ ಅವುಗಳ ಆತ್ಮ ಒಂದೇ ಆಗಿದೆ. ಹಲವು ಶತಮಾನಗಳಿಂದಸಾಂಸ್ಕೃತಿಕ, ಐತಿಹಾಸಿಕ ಮತ್ತು ಪೌರಾಣಿಕ ಸಂಬಂಧಗಳು ಎರಡೂ ದೇಶಗಳ ನಡುವೆ ಗಾಢವಾಗಿದೆ. ನೇಪಾಳವು ಇದನ್ನು ನೆನಪಿಸಿಕೊಳ್ಳಬೇಕು' ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.