ADVERTISEMENT

ನಿತೀಶ್ ಸಂಪುಟದ 26 ಸಚಿವರಲ್ಲಿ 10 ಮಂದಿ ರಾಜಕೀಯ ಹಿನ್ನೆಲೆಯ ಕುಟುಂಬದ ಕುಡಿಗಳು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ನವೆಂಬರ್ 2025, 2:45 IST
Last Updated 21 ನವೆಂಬರ್ 2025, 2:45 IST
<div class="paragraphs"><p>ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ</p></div>

ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ

   

ಕೃಪೆ: ಪಿಟಿಐ

ನವದೆಹಲಿ: ಜೆಡಿಯು ಪಕ್ಷದ ನಾಯಕ ನಿತೀಶ್‌ ಕುಮಾರ್‌ ಅವರು ದಾಖಲೆಯ 10ನೇ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ಸ್ವೀಕರಿಸಿದ್ದಾರೆ.

ADVERTISEMENT

ಪಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ನಡೆದ ಸಮಾರಂಭದಲ್ಲಿ, 26 ಮಂದಿ ಅವರ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ, ಕುಟುಂಬ ರಾಜಕಾರಣದ ಚರ್ಚೆ ಆರಂಭವಾಗಿದೆ.

ಸಂಪುಟದಲ್ಲಿರುವ 26 ಸಚಿವರ ಪೈಕಿ 10 ಮಂದಿ ರಾಜಕೀಯ ಹಿನ್ನೆಲೆ ಇರುವ ಕುಟುಂಬಗಳಿಗೆ ಸೇರಿದವರಾಗಿದ್ದು, ಪ್ರಮುಖ ವಿರೊಧ ಪಕ್ಷ ಆರ್‌ಜೆಡಿ, ಸರ್ಕಾರದ ವಿರುದ್ಧ ಟೀಕೆ ಮಾಡಿದೆ.

ಹತ್ತೂ ಸಚಿವರ ಪಟ್ಟಿಯನ್ನು ಪ್ರಮಾಣವಚನದ ಶೈಲಿಯಲ್ಲೇ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಆರ್‌ಜೆಡಿ ಹಂಚಿಕೊಂಡಿದೆ.

ಸಚಿವರ ಪಟ್ಟಿಯನ್ನು ಆರ್‌ಜೆಡಿ ಹಂಚಿಕೊಂಡಿರುವುದು ಹೀಗೆ...

  • ಸಂತೋಷ್‌ ಸುಮಿತ್‌ ಮಾಂಝಿ (ಪಕ್ಷ: ಹಿಂದೂಸ್ಥಾನಿ ಅವಾಮ್ ಮೋರ್ಚಾ)
    ನಾನು ಸಂತೋಷ್‌ ಸುಮಿತ್‌ ಮಾಂಝಿ; ಮಾಜಿ ಮುಖ್ಯಮಂತ್ರಿ, ಗಯಾ ಕ್ಷೇತ್ರದ ಸಂಸದ ಹಾಗೂ ಸದ್ಯ ಕೇಂದ್ರ ಸಚಿವರಾಗಿರುವ ಜೀತನ್‌ ರಾಮ್‌ ಮಾಂಝಿ ಅವರ ಮಗ, ಶಾಸಕಿ ಜ್ಯೋತಿ ಮಾಂಝಿ ಅವರ ಅಳಿಯ ಮತ್ತು ಶಾಸಕಿ ದೀಪಾ ಮಾಂಝಿ ಅವರ ಪತಿ! 

  • ಸಾಮ್ರಾಟ್‌ ಚೌಂಧರಿ (ಪಕ್ಷ: ಬಿಜೆಪಿ)
    ನಾನು ಸಾಮ್ರಾಟ್‌ ಚೌಧರಿ; ಮಾಜಿ ಸಚಿವ ಶಕುನಿ ಚೌಧರಿ ಹಾಗೂ ಮಾಜಿ ಶಾಸಕಿ ದಿ. ಪಾರ್ವತಿ ದೇವಿ ಅವರ ಪುತ್ರ.

  • ದೀಪಕ್‌ ಪ್ರಕಾಶ್‌ (ಪಕ್ಷ: ರಾಷ್ಟ್ರೀಯ ಲೋಕ ಮೋರ್ಚಾ)
    ನಾನು ದೀಪಕ್‌ ಪ್ರಕಾಶ್‌; ಮಾಜಿ ಕೇಂದ್ರ ಸಚಿವ, ಹಾಲಿ ರಾಜ್ಯಸಭಾ ಸಂಸದ ಉಪೇಂದ್ರ ಕುಶ್ವಾಹ ಮತ್ತು ಶಾಸಕಿ ಸ್ನೇಹಲತಾ ಅವರ ಮಗ.

  • ಶ್ರೇಯಸಿ ಸಿಂಗ್‌ (ಪಕ್ಷ: ಬಿಜೆಪಿ)
    ನಾನು ಶ್ರೇಯಸಿ ಸಿಂಗ್‌; ಕೇಂದ್ರದ ಮಾಜಿ ಸಚಿವ ದಿಗ್ವಿಜಯ್‌ ಸಿಂಗ್ ಮತ್ತು ಮಾಜಿ ಸಂಸದೆ ಪುತುಲ್‌ ಕುಮಾರಿ ಅವರ ಪುತ್ರಿ

  • ರಮಾ ನಿಶಾದ್‌ (ಪಕ್ಷ: ಬಿಜೆಪಿ)
    ನಾನು ರಮಾ ನಿಶಾದ್‌; ಕೇಂದ್ರದ ಮಾಜಿ ಸಚಿವ ಕ್ಯಾಪ್ಟನ್‌ ಜಯ ನಾರಾಯಣ್‌ ನಿಶಾದ್‌ ಅವರ ಸೊಸೆ ಹಾಗೂ ಮಾಜಿ ಸಂಸದ ಅಜಯ್‌ ನಿಶಾದ್‌ ಅವರ ಪತ್ನಿ

  • ವಿಜಯ್‌ ಚೌಧರಿ (ಪಕ್ಷ: ಜೆಡಿಯು)
    ನಾನು ವಿಜಯ್‌ ಚೌಧರಿ; ಮಾಜಿ ಶಾಸಕ ಜಗದೀಶ್‌ ಪ್ರಸಾದ್ ಚೌಧರಿ ಅವರ ಪುತ್ರ

  • ಅಶೋಕ್‌ ಚೌಧರಿ (ಪಕ್ಷ: ಜೆಡಿಯು)
    ನಾನು ಅಶೋಕ್‌ ಚೌಧರಿ; ಮಾಜಿ ಸಚಿವ ಮಹಾವೀರ್‌ ಚೌಧರಿ ಅವರ ಪುತ್ರ ಮತ್ತು ಸಮಸ್ತಿಪುರ ಸಂಸದೆ ಶಾಂಭವಿ ಚೌಧರಿ ಅವರ ತಂದೆ.

  • ನಿತಿನ್‌ ನವೀನ್‌ (ಪಕ್ಷ: ಬಿಜೆಪಿ)
    ನಾನು ನಿತಿನ್‌ ನವೀನ್‌; ಮಾಜಿ ಶಾಸಕ ನವೀಣ್‌ ಕಿಶೋರ್‌ ಸಿನ್ಹ ಅವರ ಪುತ್ರ

  • ಸುನೀಲ್‌ ಕುಮಾರ್‌ (ಪಕ್ಷ: ಜೆಡಿಯು)
    ನಾನು ಸುನೀಲ್‌ ಕುಮಾರ್‌; ಮಾಜಿ ಸಚಿವ ಚಂದ್ರಿಕಾ ರಾಮ್‌ ಅವರ ಪುತ್ರ ಮತ್ತು ಮಾಜಿ ಶಾಸಕ ಅನಿಲ್ ಕುಮಾರ್‌ ಅವರ ಸಹೋದರ.

  • ಲಿಸಿ ಸಿಂಗ್‌ (ಪಕ್ಷ: ಜೆಡಿಯು)
    ನಾನು ಲಿಸಿ ಸಿಂಗ್‌; ಸಮತಾ ಪಕ್ಷದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ದಿ. ಭೂತನ್‌ ಸಿಂಗ್‌ ಅವರ ಪತ್ನಿ.

'ಕುಟುಂಬ ರಾಜಕಾರಣದ ಕಟ್ಟಾ ವಿರೋಧಿಗಳಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಆಶೀರ್ವಾದದೊಂದಿಗೆ ರಾಜ್ಯದಲ್ಲಿ ಕುಟುಂಬಗಳ ಆಡಳಿತವನ್ನು ಕೊನೆಗಾಣಿಸುವುದಾಗಿ ಮತ್ತು ಹೊಸ ಬಿಹಾರವನ್ನು ನಿರ್ಮಿಸುವುದಾಗಿ ನಾನು ದೇವರ ಮೇಲೆ ಪ್ರಮಾಣ ಮಾಡುತ್ತೇನೆ' ಎಂದು ಬರೆದುಕೊಳ್ಳುವ ಮೂಲಕ, ಎನ್‌ಡಿಎ ಸರ್ಕಾರವನ್ನು ಕುಟುಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.