ADVERTISEMENT

ನೇತಾಜಿ ಡಿಎನ್‌ಎ ಪರೀಕ್ಷೆ: ಚಿತಾಭಸ್ಮಕ್ಕಾಗಿ ಮೊಮ್ಮಗ ಸೂರ್ಯಕುಮಾರ್ ಬೋಸ್ ಮನವಿ

ಜಪಾನ್‌ನ ರೆಂಕೋಜಿ ದೇವಸ್ಥಾನದಲ್ಲಿರುವ ಚಿತಾಭಸ್ಮ

ಪಿಟಿಐ
Published 18 ಆಗಸ್ಟ್ 2021, 13:33 IST
Last Updated 18 ಆಗಸ್ಟ್ 2021, 13:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ‘ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಚಿತಾಭಸ್ಮವನ್ನು ಜಪಾನ್‌ನ ಟೋಕಿಯೊದ ರೆಂಕೋಜಿ ದೇಗುಲದಿಂದ ಭಾರತಕ್ಕೆ ತಂದು ಡಿಎನ್‌ಎ ಪರೀಕ್ಷೆ ಮಾಡಬೇಕು’ ಎಂದು ನೇತಾಜಿ ಅವರ ಮೊಮ್ಮಗ ಸೂರ್ಯಕುಮಾರ್ ಬೋಸ್ ಅವರು ಬುಧವಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

‘1954ರ ಆಗಸ್ಟ್ 18ರಂದು ನೇತಾಜಿ ಅವರು ನಾಪತ್ತೆಯಾಗಿದ್ದರು. ಅವರು ವಿಮಾನ ದುರಂತದಲ್ಲಿ ಸಾವನ್ನಪ್ಪಿರಬಹುದು ಎಂದು ಇತಿಹಾಸಕಾರರು ಹೇಳುತ್ತಾರೆ. ಆದರೆ, ಅವರು ಅಪಘಾತದಲ್ಲಿ ಸಾಯಲಿಲ್ಲ, ಸಾಯುವವರೆಗೆ ಮಾರುವೇಷದಲ್ಲಿ ಜೀವಿಸಿದ್ದರು ಎಂದು ಅನೇಕರು ಹೇಳುತ್ತಾರೆ. ಈ ವಿವಾದಕ್ಕೆ ತೆರೆ ಎಳೆಯಲು ಜಪಾನ್‌ನಲ್ಲಿರುವ ನೇತಾಜಿ ಅವರ ಚಿತಾಭಸ್ಮವನ್ನು ಭಾರತಕ್ಕೆ ತಂದು ಡಿಎನ್ಎ ಪರೀಕ್ಷೆ ಮಾಡಬೇಕು’ ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಅವರು ಕೋರಿದ್ದಾರೆ.

‘ಎರಡು ದಶಕಗಳ ಹಿಂದೆ ನ್ಯಾಯಮೂರ್ತಿ ಮುಖರ್ಜಿ ಆಯೋಗವು (ಜೆಎಂಸಿಐ) ರೆಂಕೋಜಿ ದೇಗುಲದ ಅಧಿಕಾರಿಗಳು ನೀಡಿದ್ದ ಚಿತಾಭಸ್ಮದ ಡಿಎನ್‌ಎ ಪರೀಕ್ಷೆ ಮಾಡದೇ ಅಮೂಲ್ಯವಾದ ಅವಕಾಶವೊಂದನ್ನು ಕಳೆದುಕೊಂಡಿತು. ನೇತಾಜಿ ಅವರ ಕಣ್ಮರೆ ಕುರಿತ ಊಹಾಪೋಹಗಳಿಗೆ ತೆರೆ ಎಳೆಯಲು ಅವರ ಚಿತಾಭಸ್ಮವನ್ನು ಮರಳಿ ತಂದರೆ ಡಿಎನ್ಎ ಪರೀಕ್ಷೆ ಮಾಡಬಹುದು’ ಎಂದು ಜರ್ಮನಿಯಲ್ಲಿರುವ ಸೂರ್ಯಕುಮಾರ್ ಬೋಸ್ ಒತ್ತಾಯಿಸಿದ್ದಾರೆ.

ADVERTISEMENT

ಈ ಹಿಂದೆ, ನೇತಾಜಿಯವರ ಮಗಳು ಅನಿತಾ ಬೋಸ್ ಅವರು ಕೂಡಾ ತಮ್ಮ ತಂದೆಯ ಅವಶೇಷಗಳನ್ನು ಮರಳಿ ತರುವ ಕುರಿತು ಭಾರತ ಮತ್ತು ಜಪಾನ್ ಸರ್ಕಾರಗಳಿಗೆ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.