ADVERTISEMENT

ಒಪ್ಪಂದಕ್ಕೆ ಬರುವವರೆಗೆ ಪ್ರತಿಭಟನೆ ನಿಲ್ಲಿಸಲ್ಲ: ಬಿಕೆಯು ಮುಖಂಡ ರಾಕೇಶ್ ಟಿಕಾಯತ್

ಪಿಟಿಐ
Published 13 ಫೆಬ್ರುವರಿ 2021, 3:08 IST
Last Updated 13 ಫೆಬ್ರುವರಿ 2021, 3:08 IST
ರಾಕೇಶ್ ಟಿಕಾಯತ್ (ಪಿಟಿಐ ಸಂಗ್ರಹ ಚಿತ್ರ)
ರಾಕೇಶ್ ಟಿಕಾಯತ್ (ಪಿಟಿಐ ಸಂಗ್ರಹ ಚಿತ್ರ)   

ನವದೆಹಲಿ: ಕೇಂದ್ರ ಸರ್ಕಾರದ ಜತೆ ಒಪ್ಪಂದಕ್ಕೆ ಬರುವವರೆಗೆ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಮನೆಗೆ ಮರಳಲ್ಲ ಎಂದು ಬಿಕೆಯು (ಭಾರತೀಯ ಕಿಸಾನ್ ಯೂನಿಯನ್) ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ರೈತ ನಾಯಕರು ಸಭೆ ನಡೆಸುವ ಬಗ್ಗೆಯೂ ಅವರು ಸುಳಿವು ನೀಡಿದ್ದಾರೆ.

ಸರ್ಕಾರವು ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯದ ಹೊರತು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಈ ಹಿಂದೆ ಟಿಕಯಾತ್ ಹೇಳಿದ್ದರು. ಇದೀಗ ಒಪ್ಪಂದಕ್ಕೆ ಬರುವವರೆಗೆ ಎನ್ನುವ ಮೂಲಕ ಪಟ್ಟು ಸಡಿಲಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಸಂಪೂರ್ಣವಾಗಿ ಕಾಯ್ದೆಗಳನ್ನು ರದ್ದುಗೊಳಿಸುವ ಬೇಡಿಕೆ ಬದಲು ಇತರ ಆಯ್ಕೆಗಳ ಬಗ್ಗೆ ಯೋಚಿಸಿ ಎಂದು ಕೇಂದ್ರ ಸರ್ಕಾರವು ರೈತರಿಗೆ ಹೇಳುತ್ತಲೇ ಬಂದಿದೆ.

ADVERTISEMENT

ರೈತ ಸಂಘಟನೆಗಳ ಸಮಿತಿಯೊಂದಿಗೆ ಸರ್ಕಾರವು ಮಾತುಕತೆ ನಡೆಸಬೇಕಾಗುತ್ತದೆ ಎಂದೂ ಟಿಕಾಯತ್ ಹೇಳಿದ್ದಾರೆ.

‘ಕೇಂದ್ರ ಸರ್ಕಾರವು ಸಮಿತಿ ಜತೆ ಮಾತುಕತೆ ನಡೆಸಿ ಒಪ್ಪಂದಕ್ಕೆ ಬರುವವರೆಗೆ ಪ್ರತಿಭಟನೆ ಮುಂದುವರಿಯಲಿದೆ. ಅಲ್ಲಿವರೆಗೆ ಪ್ರತಿಭಟನಾನಿರತ ರೈತರು ಮನೆಗೆ ಮರಳುವುದಿಲ್ಲ’ ಎಂದು ಟಿಕ್ರಿ ಗಡಿಯಲ್ಲಿ ಆಯೋಜಿಸಲಾಗಿದ್ದ ‘ಮಹಾಪಂಚಾಯತ್’ ಉದ್ದೇಶಿಸಿ ಮಾತನಾಡಿದ ವೇಳೆ ಅವರು ತಿಳಿಸಿದ್ದಾರೆ.

ಪ್ರತಿಭಟನೆಯು ಪಂಜಾಬ್, ಹರಿಯಾಣ, ಉತ್ತರ ಪ್ರದೇಶಕ್ಕಷ್ಟೇ ಸೀಮಿತವಾಗಿಲ್ಲ. ದೇಶದಾದ್ಯಂತ ಹರಡಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಇನ್ನಷ್ಟು ‘ಮಹಾಪಂಚಾಯತ್‌’ಗಳು ನಡೆಯಲಿವೆ. ಗುಜರಾತ್‌ಗೂ ತೆರಳಲಿದ್ದೇವೆ. ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಗುಜರಾತ್‌ ರೈತರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.