ADVERTISEMENT

ಹೊಸ ಕೊರೊನಾ: ಬ್ರಿಟನ್ ವಿಮಾನ ನಿಷೇಧಿಸಲು ಕೇಜ್ರಿ‌ವಾಲ್, ಗೆಹ್ಲೋಟ್‌ ಆಗ್ರಹ

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ದೆಹಲಿ ಸಿ.ಎಂ. ಕೇಜ್ರಿವಾಲ್‌

ಪಿಟಿಐ
Published 21 ಡಿಸೆಂಬರ್ 2020, 9:36 IST
Last Updated 21 ಡಿಸೆಂಬರ್ 2020, 9:36 IST
ಅರವಿಂದ ಕೇಜ್ರಿವಾಲ್‌ ಮತ್ತು ಅಶೋಕ್‌ ಗೆಹ್ಲೋಟ್‌
ಅರವಿಂದ ಕೇಜ್ರಿವಾಲ್‌ ಮತ್ತು ಅಶೋಕ್‌ ಗೆಹ್ಲೋಟ್‌   

ಜೈಪುರ/ ನವದೆಹಲಿ: ಬ್ರಿಟನ್‌ನಲ್ಲಿ ಹೊಸ ಸ್ವರೂಪದ ಕೊರೊನಾವೈರಸ್‌ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬ್ರಿಟನ್ ಮತ್ತು ಯೂರೋಪ್‌ ರಾಷ್ಟ್ರಗಳಿಂದ ಬರುವ ಎಲ್ಲಾ ವಿಮಾನಗಳನ್ನು ತಕ್ಷಣ ನಿಷೇಧಿಸುವಂತೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಕೋವಿಡ್ 19 ಸೋಂಕು ಹರಡಲು ಆರಂಭವಾದ ಸಮಯದಲ್ಲಿ, ಅಂತರರಾಷ್ಟ್ರೀಯ ವಿಮಾನ ಸಂಚಾರವನ್ನು ನಿಷೇಧಿಸಲು ವಿಳಂಬವಾದ ಕಾರಣ, ದೇಶದಲ್ಲಿ ಸೋಂಕಿನ ಪ್ರಕರಣ ತೀವ್ರವಾಯಿತು‘ ಎಂದು ಟ್ವೀಟ್‌ ಮಾಡಿರುವ ಗೆಹ್ಲೋಟ್, ‘ಹೊಸ ಕೊರೊನಾವೈರಸ್ ಸೋಂಕು ಹರಡುವುದನ್ನು ತಪ್ಪಿಸಲು ತಕ್ಷಣದಿಂದಲೇ ಯೂರೋಪ್ ರಾಷ್ಟ್ರಗಳಿಂದ ಬರುವ ಎಲ್ಲ ವಿಮಾನಗಳನ್ನೂ ನಿಷೇಧಿಸಬೇಕು‘ ಎಂದು ಗೆಹ್ಲೋಟ್‌ ಒತ್ತಾಯಿಸಿದ್ದಾರೆ.

‘ಬ್ರಿಟನ್‌ನಲ್ಲಿ ಹೊಸ ಕೊರೊನಾವೈರಸ್ ಕಾಣಿಸಿಕೊಂಡಿರುವುದು ಆತಂಕಕಾರಿ ಸಂಗತಿ. ಕೇಂದ್ರ ಸರ್ಕಾರ, ಈ ವಿಚಾರದಲ್ಲಿ ಪ್ರಾಮಾಣಿಕವಾದ ಕ್ರಮಗಳನ್ನು ಕೈಗೊಳ್ಳಬೇಕು. ಬ್ರಿಟನ್‌ ಮತ್ತು ಯೂರೋಪ್‌ ದೇಶಗಳ ವಿಮಾನಗಳ ಹಾರಾಟ ನಿಷೇಧದ ಜತೆಗೆ, ದೇಶದಲ್ಲಿರುವ ಆರೋಗ್ಯ ನಿಯಮಗಳನ್ನು ಇನ್ನಷ್ಟು ಬಲಗೊಳಿಸಬೇಕು. ನಮ್ಮ ಆರೋಗ್ಯ ತಜ್ಞರು, ಸೋಂಕು ಹರಡುವುದನ್ನು ತಪ್ಪಿಸುವ ಜತೆಗೆ, ಚಿಕಿತ್ಸೆ ನೀಡಲು ಸನ್ನದ್ಧರಾಬೇಕಾಗಿದೆ‘ ಎಂದು ಗೆಹ್ಲೋಟ್ ಹೇಳಿದ್ದಾರೆ.

ADVERTISEMENT

ಹೊಸ ಸ್ವರೂಪದ ಕೊರೊನಾ ವೈರಸ್‌ ಬಹು ಬೇಗ ಹರಡುವ ಗುಣ ಹೊಂದಿರುವುದರಿಂದ ಬ್ರಿಟನ್‌ನಿಂದ ಬರುವ ಎಲ್ಲಾ ವಿಮಾನ ಸಂಚಾರಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಬೇಕು ಎಂದು ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

ಬ್ರಿಟನ್ ಸರ್ಕಾರ ಹೊಸ ಕೊರೊನಾವೈರಸ್ ಕಾಣಿಸಿಕೊಂಡಿರುವ ಕುರಿತು ಪ್ರಕಟಣೆ ಹೊರಡಿಸಿದ ಮೇಲೆ, ಯೂರೋಪ್‌ನ ಹಲವು ರಾಷ್ಟ್ರಗಳು ಬ್ರಿಟನ್‌ನಿಂದ ಬರುವ ಎಲ್ಲ ವಿಮಾನಗಳನ್ನು ನಿಷೇಧಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.