ಏಕನಾಥ ಶಿಂದೆ, ಅಜಿತ್ ಪವಾರ್ ಮತ್ತು ದೇವೇಂದ್ರ ಫಡಣವೀಸ್
Credit: DH Illustration
ಮುಂಬೈ: ಮಹಾರಾಷ್ಟ್ರದಲ್ಲಿ ‘ಮಹಾಯುತಿ’ ಮೈತ್ರಿಕೂಟದ ಹೊಸ ಸರ್ಕಾರ ಡಿಸೆಂಬರ್ 5ರಂದು ರಚನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಇತರ ಆಕಾಂಕ್ಷಿಗಳ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡಣವೀಸ್ ಅವರ ಹೆಸರು ಮುಂಚೂಣಿಯಲ್ಲಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಜತೆಗೆ ಅಜಿತ್ ಪವಾರ ನೇತೃತ್ವದ ಎನ್‌ಸಿಪಿ ಕೂಡ ಪಢಣವೀಸ್ ಅವರಿಗೆ ಬೆಂಬಲ ಸೂಚಿಸಿದೆ.
ಅಧಿಕಾರ ಹಚಿಕೆ ಸೂತ್ರ ಮತ್ತು ಖಾತೆ ಹಂಚಿಕೆ ಬಗ್ಗೆ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಾದ ಏಕನಾಥ ಶಿಂಧೆ ನೇತೃತ್ವದ ಶಿವಸೇನಾ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಡುವೆ ವಾರಾಂತ್ಯದಲ್ಲಿ ಮಾತುಕತೆ ಮುಂದುವರಿದಿರುವಾಗಲೇ ಬಿಜೆಪಿಯಿಂದ ಸರ್ಕಾರ ರಚನೆಯ ದಿನಾಂಕದ ಬಗ್ಗೆ ಹೇಳಿಕೆ ಹೊರಬಿದ್ದಿದೆ.
‘ಕಾಯುವಿಕೆ ಕೊನೆಗೊಂಡಿದೆ. ನಾನು ಮಹಾರಾಷ್ಟ್ರದ ಜನರನ್ನು ಅಭಿನಂದಿಸುವೆ. ಮಹಾಯುತಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಗುರುವಾರ ಸಂಜೆ 5 ಗಂಟೆಗೆ ಐತಿಹಾಸಿಕ ಆಜಾದ್ ಮೈದಾನದಲ್ಲಿ ನಡೆಯಲಿದೆ. ಪ್ರಧಾನಿ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಬಾವಂಕುಲೆ ತಿಳಿಸಿದ್ದಾರೆ.
ಭಾನುವಾರ ನಾಯಕರ ಸಭೆ ಸಾಧ್ಯತೆ:
ಮಹಾಯುತಿ ನಾಯಕರ ಸಭೆ ಭಾನುವಾರ ನಡೆಯುವ ಸಾಧ್ಯತೆಯಿದೆ ಎಂದು ಹಿಂದಿನ ವಿಧಾನಸಭೆಯಲ್ಲಿ ಸ್ಪೀಕರ್ ಆಗಿದ್ದ ಕೊಲಾಬಾ ಕ್ಷೇತ್ರದ ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಹೇಳಿದ್ದಾರೆ.
ಶಿಂಧೆ ಅವರು ತಮ್ಮ ಸ್ವಗ್ರಾಮಕ್ಕೆ ತೆರಳಿದ್ದರಿಂದ ಶುಕ್ರವಾರ ನಿಗದಿಯಾಗಿದ್ದ ಮಹಾಯುತಿ ಪ್ರಮುಖರ ಸಭೆಯನ್ನು ಮುಂದೂಡಲಾಗಿತ್ತು. ಇದರಿಂದ ಸರ್ಕಾರ ರಚನೆ ಮತ್ತಷ್ಟು ವಿಳಂಬವಾಗಿತ್ತು.
ಎರಡು ಬಾರಿ ಮುಖ್ಯಮಂತ್ರಿ ಮತ್ತು ಒಮ್ಮೆ ಉಪಮುಖ್ಯಮಂತ್ರಿಯಾಗಿರುವ ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಫಡಣವೀಸ್ ಅವರು ಹೊಸ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದಾರೆ ಎಂದು ನಾರ್ವೇಕರ್ ಹೇಳಿದ್ದಾರೆ.
ನಿಯೋಜಿತ ಸಿ.ಎಂ ಶಿಂಧೆ ಅವರು ಸತಾರಾ ಜಿಲ್ಲೆಯ ಮಹಾಬಲೇಶ್ವರ ಗಿರಿಧಾಮದ ಬಳಿಯ ಡೇರ್‌ನಲ್ಲಿರುವ ತಮ್ಮ ಸ್ವಗ್ರಾಮದಲ್ಲಿದ್ದರೆ, ಫಡಣವೀಸ್ ಮತ್ತು ಅಜಿತ್ ಪವಾರ್ ಅವರು ಪ್ರತ್ಯೇಕ ಕಾರ್ಯಕ್ರಮಗಳ ನಿಮಿತ್ತ ಪುಣೆಯಲ್ಲಿದ್ದಾರೆ. ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವ ಶಿಂಧೆ ಅವರು ತಮ್ಮ ಹಳ್ಳಿ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಡಿ.2–3ರಂದು ಬಿಜೆಪಿ ಶಾಸಕಾಂಗ ಸಭೆ:
ಡಿಸೆಂಬರ್ 2 ಅಥವಾ 3 ರಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಭೆ ನಡೆಸಲಾಗುವುದು ಎಂದು ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕ ತಿಳಿಸಿದ್ದಾರೆ.
ಅಜಿತ್ ಪವಾರ್ ಅವರು ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕರಾಗಿ ಚುನಾಯಿತರಾಗಿದ್ದರೆ, ಶಿವಸೇನಾದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಏಕನಾಥ ಶಿಂಧೆ ಅವರಿಗೆ ಎಲ್ಲಾ ಅಧಿಕಾರ ನೀಡಲಾಗಿದೆ.
ನ.23 ರಂದು ಫಲಿತಾಂಶ ಪ್ರಕಟವಾದರೂ ತ್ರಿಪಕ್ಷೀಯ ಮೈತ್ರಿಕೂಟವು ಮುಂದಿನ ಮುಖ್ಯಮಂತ್ರಿ ಯಾರೆಂಬುದನ್ನು ನಿರ್ಧರಿಸದ ಕಾರಣ ಸರ್ಕಾರ ರಚನೆ ವಿಳಂಬವಾಗಿದೆ.
ನಾಯಕರು ಮರಳಿದ ಮೇಲೆ ಸರ್ಕಾರ ರಚನೆಗೆ ಅಂತಿಮ ರೂಪ:
ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯ ನಂತರ ಮತ್ತು ಶಿಂಧೆ ಅವರು ಮುಂಬೈಗೆ ಹಿಂದಿರುಗಿದ ಮೇಲೆ ‘ಮಹಾಯುತಿ’ಯ ಉನ್ನತ ನಾಯಕರು ಭೇಟಿಯಾಗಿ ಸರ್ಕಾರ ರಚನೆಗೆ ಅಂತಿಮ ರೂಪ ನೀಡಲಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು ನವದೆಹಲಿಯಲ್ಲಿ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ, ಮಹರಾಷ್ಟ್ರದ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.