ADVERTISEMENT

ಮೌಂಟ್‌ ಎವರೆಸ್ಟ್‌ ಪರಿಷ್ಕೃತ ಎತ್ತರ 8,848.86 ಮೀ.

ಪಿಟಿಐ
Published 8 ಡಿಸೆಂಬರ್ 2020, 12:56 IST
Last Updated 8 ಡಿಸೆಂಬರ್ 2020, 12:56 IST
ಮೌಂಟ್‌ ಎವರೆಸ್ಟ್‌
ಮೌಂಟ್‌ ಎವರೆಸ್ಟ್‌   

ಕಠ್ಮಂಡು/ಬೀಜಿಂಗ್‌: ವಿಶ್ವದ ಅತಿ ಎತ್ತರದ ಪರ್ವತ ಮೌಂಟ್‌ ಎವರೆಸ್ಟ್‌ನ ಪರಿಷ್ಕೃತ ಎತ್ತರ 8,848.86 ಮೀಟರ್ ಎಂದು ನೇಪಾಳ ಹಾಗೂ ಚೀನಾ ಮಂಗಳವಾರ ಜಂಟಿಯಾಗಿ ಘೋಷಿಸಿವೆ.

ಇದು 1954ರಲ್ಲಿ ಭಾರತವು ನಡೆಸಿದ ಅಳತೆಗಿಂತ 86 ಸೆಂ.ಮೀ ಅಧಿಕವಾಗಿದೆ. 2015ರಲ್ಲಿ ಸಂಭವಿಸಿದ ಭೂಕಂಪ ಸೇರಿದಂತೆ ಹಲವು ಕಾರಣಗಳಿಂದಾಗಿ ಪರ್ವತದ ಎತ್ತರದಲ್ಲಿ ಬದಲಾವಣೆ ಆಗಿರಬಹುದು ಎನ್ನುವ ಕಾರಣದಿಂದ, ನಿಖರವಾದ ಎತ್ತರವನ್ನು ಅಳೆಯಲು ನೇಪಾಳ ಸರ್ಕಾರವು ನಿರ್ಧರಿಸಿತ್ತು. ನೇಪಾಳ ಹಾಗೂ ಚೀನಾದ ಈ ಜಂಟಿ ಘೋಷಣೆಯನ್ನು ಚೀನಾದ ಷಿನುಆ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಾರತವು 1954ರಲ್ಲಿ ನಡೆಸಿದ ಸಮೀಕ್ಷೆಯಂತೆ ಮೌಂಟ್‌ ಎವರೆಸ್ಟ್‌ ಎತ್ತರವು 8,848 ಮೀಟರ್‌ ಆಗಿತ್ತು. ನಂತರದಲ್ಲಿ 1975 ಹಾಗೂ 2005ರಲ್ಲಿ ಚೀನಾದ ಸರ್ವೇಯರ್‌ಗಳು ನಡೆಸಿದ ಆರು ಸುತ್ತಿನ ಸಮೀಕ್ಷೆ ಹಾಗೂ ವೈಜ್ಞಾನಿಕ ಸಂಶೋಧನೆಯಲ್ಲಿ ಮೌಂಟ್‌ ಎವರೆಸ್ಟ್‌ನ ಎತ್ತರ ಕ್ರಮವಾಗಿ 8,848.13 ಮೀಟರ್‌ ಹಾಗೂ 8,844.43 ಮೀಟರ್‌ ಎಂದು ಉಲ್ಲೇಖಿಸಲಾಗಿತ್ತು.

ADVERTISEMENT

ಮೌಂಟ್‌ ಎವರೆಸ್ಟ್‌ ತುದಿಯ ಮುಖಾಂತರ ಗಡಿ ರೇಖೆಯು ಸಾಗುವುದಕ್ಕೆ ಒಪ್ಪಿಗೆ ನೀಡುವುದರ ಮೂಲಕ, 1961ರಲ್ಲಿ ಗಡಿ ಸಂಘರ್ಷವನ್ನು ಚೀನಾ ಹಾಗೂ ನೇಪಾಳ ಇತ್ಯರ್ಥಗೊಳಿಸಿತ್ತು.

‘ಮೌಂಟ್‌ ಎವರೆಸ್ಟ್‌ನ ನಿಖರ ಎತ್ತರವನ್ನು ಪತ್ತೆಹಚ್ಚುವುದರಿಂದ, ಹಿಮಾಲಯ ಹಾಗೂ ಕ್ವಿನ್‌ಘೈ–ಟಿಬೆಟ್‌ ಪ್ರಸ್ಥಭೂಮಿಯಲ್ಲಿ ಆಗುತ್ತಿರುವ ಬದಲಾವಣೆಯನ್ನು ಅಧ್ಯಯನ ಮಾಡಲು ಸಹಕಾರಿಯಾಗಲಿದೆ’ ಎಂದು ಚೈನೀಸ್‌ ಅಕಾಡೆಮಿ ಆಫ್‌ ಸೈನ್ಸ್‌ನ ವಿಜ್ಞಾನಿ ಗಾವ್‌ ಡೆಂಗೈ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.