ADVERTISEMENT

2026: ಹೊಸ ವರ್ಷಕ್ಕೆ ರೈಲ್ವೆ ವಲಯದಲ್ಲಿ ಆಗುತ್ತಿರುವ ಪ್ರಮುಖ ಬದಲಾವಣೆಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2025, 11:16 IST
Last Updated 24 ಡಿಸೆಂಬರ್ 2025, 11:16 IST
   

ಬೆಂಗಳೂರು: 2026ರ ವರ್ಷಾರಂಭದಿಂದ ಎಲ್ಲಾ ವಲಯಗಳಲ್ಲೂ ಸಾಮಾನ್ಯವಾಗಿ ಏನಾದರೊಂದು ಬದಲಾವಣೆಗಳು ಆಗುತ್ತಿರುತ್ತವೆ. ರೈಲ್ವೆ ವಲಯದಲ್ಲಿ ಕೂಡ ಹೊಸ ವರ್ಷದ ಆರಂಭಕ್ಕೆ ಅನೇಕ ಬದಲಾವಣೆಗಳು ಆಗುತ್ತಿವೆ.

2026ರಲ್ಲಿ ರೈಲ್ವೆ ವಲಯದಲ್ಲಿ ಆಗುವ ಬದಲಾವಣೆಗಳು

ವಂದೇ ಭಾರತ್ ಸ್ಲೀಪರ್ ರೈಲು: 2026ರಲ್ಲಿ ಹೊಸ ವಂದೇ ಭಾರತ್ ಸ್ಲೀಪರ್ ರೈಲುಗಳ ಸೇವೆ ಆರಂಭವಾಗಲಿದೆ.

ಟಿಕೆಟ್ ದರ ಹೆಚ್ಚಳ: ಭಾರತೀಯ ರೈಲ್ವೆ ಸಚಿವಾಲಯವು ಡಿಸೆಂಬರ್ 26ರಿಂದ ಜಾರಿಗೆ ಬರುವಂತೆ ರೈಲು ಪ್ರಯಾಣ ದರವನ್ನು ಹೆಚ್ಚಳ ಮಾಡಿದೆ. ಮೇಲ್‌ ಹಾಗೂ ಎಕ್ಸ್‌ಪ್ರೆಸ್‌ ರೈಲುಗಳ ಎಸಿ ಹಾಗೂ ನಾನ್‌ ಎಸಿ ಪ್ರಯಾಣ ದರವನ್ನು ಪ್ರತಿ ಕಿ.ಮೀಗೆ 2 ಪೈಸೆ ಏರಿಕೆ ಮಾಡಿದೆ. ನಾನ್-ಎಸಿ ಕೋಚ್‌ನಲ್ಲಿ 500 ಕಿ.ಮೀ ಪ್ರಯಾಣಿಸುವ ಪ್ರಯಾಣಿಕರು ₹10 ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.

ADVERTISEMENT

ಹಾಗಾಗಿ ಹೊಸವರ್ಷದಿಂದ ರೈಲಿನ ಮೂಲಕ ದೂರದ ಊರುಗಳಿಗೆ ಪ್ರಯಾಣಿಸುವವರಿಗೆ ಟಿಕೆಟ್‌ ದರವು ತುಸು ಹೊರೆಯಾಗಲಿದೆ. ಆದರೆ, 215 ಕಿ.ಮೀ ವರೆಗಿನ ಸಾಮಾನ್ಯ ದರ್ಜೆಯ ಪ್ರಯಾಣದರದಲ್ಲಿ ಯಾವುದೇ ಏರಿಕೆಯಾಗಿಲ್ಲ.

ಪ್ರಯಾಣ ದರ ಏರಿಕೆಯಿಂದ 2026ರ ಮಾರ್ಚ್‌ ವೇಳೆಗೆ ರೈಲ್ವೆ ಇಲಾಖೆಗೆ ಹೆಚ್ಚುವರಿಯಾಗಿ ₹600 ಕೋಟಿ ಆದಾಯ ಬರಲಿದೆ

ರೈಲುಗಳ ಮರುನಾಮಕರಣ: 2026ರ ಫೆಬ್ರುವರಿ ತಿಂಗಳಿನಿಂದ ಕೆಲವು ಎಕ್ಸ್‌ಪ್ರೆಸ್ ರೈಲುಗಳ ಹೆಸರು ಮತ್ತು ಸಂಖ್ಯೆ ಬದಲಾಗಲಿದೆ.

ರೈಲ್ವೆ ನೇಮಕಾತಿ: ರೈಲ್ವೆ ನೇಮಕಾತಿ ಮಂಡಳಿಯು 2026ರ ಉದ್ಯೋಗ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ಸಹಾಯಕ ಲೋಕೋಪೈಲಟ್, ತಂತ್ರಜ್ಞ, ವಿಭಾಗ ನಿಯಂತ್ರಕ, ಪ್ಯಾರಾಮೆಡಿಕಲ್, ಜೆಇ ಮತ್ತು ಗ್ರೂಪ್-ಡಿ ಸೇರಿದಂತೆ ವಿವಿಧ ಹುದ್ದೆಗಳ ಅಧಿಸೂಚನೆಗಳು ಫೆಬ್ರವರಿ-ಅಕ್ಟೋಬರ್ 2026ರ ನಡುವೆ ಬರಲಿವೆ.

ರೈಲ್ವೆ ಮಾರ್ಗಗಳ ವಿದ್ಯುದ್ದೀಕರಣ: 2026ರಲ್ಲಿ ದೇಶದಲ್ಲಿರುವ ಎಲ್ಲಾ ರೈಲ್ವೆ ಮಾರ್ಗಗಳನ್ನು ವಿದ್ಯುದ್ದೀಕರಣ ಮಾಡಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

ರೈಲು ಸೇವೆಯ ವಿಸ್ತರಣೆ: ಎಸಿ ಸೌಲಭ್ಯದ ಅಮೃತ್ ಭಾರತ್ ರೈಲು ಹಾಗೂ ನಮೋ ಭಾರತ್ ರೈಲು ಮಾರ್ಗ ವಿಸ್ತರಣೆಯಾಗಲಿದೆ.

ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ: ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಎಸಿ ಕೋಚ್‌ಗಳಲ್ಲಿ ಹಣ ಪಾವತಿ ಮಾಡಿ ಅಗತ್ಯವಿರುವ ಬೆಡ್‌ಶೀಟ್/ದಿಂಬುಗಳನ್ನು ಪಡೆದುಕೊಳ್ಳಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.