
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
ಕೃಪೆ: ಪಿಟಿಐ
ಬೆಂಗಳೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಗಣ್ಯರು ದೇಶದ ಜನರಿಗೆ ಶುಭ ಹಾರೈಸಿದ್ದಾರೆ.
ಹೊಸ ವರ್ಷಕ್ಕೆ ಸ್ವಾಗತ ಕೋರಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮುರ್ಮು, ದೇಶ ಮತ್ತು ವಿದೇಶಗಳಲ್ಲಿರುವ ಎಲ್ಲಾ ಭಾರತೀಯರಿಗೆ ಶುಭವಾಗಲಿ ಎಂದಿದ್ದಾರೆ.
ಮೋದಿ ಅವರು, '2026 ಎಲ್ಲರ ಪಾಲಿಗೆ ಉತ್ತಮ ವರ್ಷವಾಗಿರಲಿ ಎಂದು ಹಾರೈಸುವೆ. ನಿಮ್ಮ ಪ್ರಯತ್ನಗಳಿಗೆ ಯಶಸ್ಸನ್ನು, ನೀವು ಮಾಡುವ ಪ್ರತಿಯೊಂದರಲ್ಲೂ ಗೆಲುವಿನೊಂದಿಗೆ ಉತ್ತಮ ಆರೋಗ್ಯ ಹಾಗೂ ಸಮೃದ್ಧಿಯನ್ನು ತರಲಿ. ಸಮಾಜದಲ್ಲಿ ಶಾಂತಿ, ಸಂತೋಷ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ' ಎಂಬುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, 'ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹೊಸ ವರ್ಷವು ನಿಮ್ಮ ಜೀವನದಲ್ಲಿ ಅಪಾರ ಸಂತೋಷ, ಉತ್ತಮ ಆರೋಗ್ಯ ಮತ್ತು ಯಶಸ್ಸನ್ನು ತರಲಿ' ಎಂದು ಬರೆದುಕೊಂಡಿದ್ದಾರೆ.
ಹೊಸ ವರ್ಷಕ್ಕೆ ಶುಭಾಶಯ ಕೋರಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೇಶದ ಜನರು ಮುಂದಿನ ವರ್ಷ ಕೈಗೊಳ್ಳಬೇಕಿರುವ ಸಂಕಲ್ಪದ ಕುರಿತು ಕರೆ ನೀಡಿದ್ದಾರೆ.
'ಕೆಲಸ ಮಾಡುವ ಹಕ್ಕು, ಮತದಾನದ ಹಕ್ಕು, ಘನತೆಯಿಂದ ಬದುಕುವ ಹಕ್ಕು ಸೇರಿದಂತೆ ದುರ್ಬಲರ ಹಕ್ಕುಗಳನ್ನು ರಕ್ಷಿಸಲು ನಾವೆಲ್ಲರೂ ಸಾಮೂಹಿಕ ಚಳವಳಿ ಮಾಡೋಣ. ಒಗ್ಗಟ್ಟಾಗಿ ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸೋಣ. ನಾಗರಿಕದ ಸಬಲೀಕರಣ ಹಾಗೂ ಸಮಾಜದಲ್ಲಿ ಸಾಮರಸ್ಯವನ್ನು ಬಲಪಡಿಸೋಣ' ಎಂದು ಕರೆ ನೀಡಿದ್ದಾರೆ.
'ನಮ್ಮ ಯುವಕರಿಗೆ ನೌಕರಿ, ಮಹಿಳೆಯರಿಗೆ ಸುರಕ್ಷತೆ, ರೈತರಿಗೆ ಸಮೃದ್ಧಿ, ಸಮಾಜದ ಅಂಚಿನಲ್ಲಿರುವವರಿಗೆ ಘನತೆ ಮತ್ತು ಎಲ್ಲರಿಗೂ ಉತ್ತಮ ಗುಣಮಟ್ಟದ ಜೀವನ – ಇವೆಲ್ಲವೂ ನಮ್ಮ ಸಂಕಲ್ಪವಾಗಿರಬೇಕು' ಎಂದು ಆಶಿಸುತ್ತಾ, 'ಮುಂಬರುವ ವರ್ಷವು ಪ್ರತಿಯೊಬ್ಬರಿಗೂ ಸಂತೋಷ, ಸಮೃದ್ಧಿ ಮತ್ತು ಪ್ರಗತಿ ತರಲಿ' ಎಂದು ಹಾರೈಸಿದ್ದಾರೆ.
'ಸಂತಸ ಹಾಗೂ ಹೊಸ ಭರವಸೆಯ ವರ್ಷವನ್ನು ಬರ ಮಾಡಿಕೊಳ್ಳುತ್ತಿರುವ ಎಲ್ಲರಿಗೂ ಹೊಸ ವರ್ಷದ ಹೃತ್ಪೂರ್ವಕ ಶುಭಾಶಯಗಳು' ಎಂದಿರುವ ಕರ್ನಾಟಕ ಉಪ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 'ಮುಂಬರುವ ವರ್ಷವು ಉತ್ತಮ ಆರೋಗ್ಯ, ನವ ಆತ್ಮವಿಶ್ವಾಸ, ಅರ್ಥಪೂರ್ಣ ಅವಕಾಶಗಳನ್ನು ತರಲಿ. ಬದುಕಿನ ಪ್ರತಿ ಹಂತದಲ್ಲೂ ಸಕಾರಾತ್ಮಕತೆ, ಉದ್ದೇಶ ಹಾಗೂ ಪ್ರಗತಿಯೊಂದಿಗೆ ಮುನ್ನಡೆಯಲು ಪ್ರತಿಯೊಬ್ಬರಲ್ಲೂ ಸ್ಫೂರ್ತಿ ತುಂಬಲಿ' ಎಂದು ಹಾರೈಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.