ADVERTISEMENT

ಪತ್ರಿಕಾ ಉದ್ಯಮಕ್ಕೆ ₹15 ಸಾವಿರ ಕೋಟಿ ನಷ್ಟ ಸಾಧ್ಯತೆ: 30 ಲಕ್ಷ ಮಂದಿಗೆ ತೊಂದರೆ

ನೆರವಿನ ಪ್ಯಾಕೇಜ್‌ ಘೋಷಿಸುವಂತೆ ಕೇಂದ್ರಕ್ಕೆ ಭಾರತೀಯ ಪತ್ರಿಕಾ ಸೊಸೈಟಿ ಕೋರಿಕೆ

​ಪ್ರಜಾವಾಣಿ ವಾರ್ತೆ
Published 2 ಮೇ 2020, 9:22 IST
Last Updated 2 ಮೇ 2020, 9:22 IST
   

ನವದೆಹಲಿ:ಲಾಕ್‌ಡೌನ್‌ನಿಂದಾಗಿದೇಶದ ಪತ್ರಿಕಾ ಉದ್ಯಮವು ತೀವ್ರ ನಷ್ಟ ಅನುಭವಿಸಿದ್ದು,ಕೇಂದ್ರ ಸರ್ಕಾರವು ಕೂಡಲೇ ಉತ್ತೇಜನಾ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ಭಾರತೀಯ ಪತ್ರಿಕಾ ಸೊಸೈಟಿ (ಐಎನ್‌ಎಸ್) ಒತ್ತಾಯಿಸಿದೆ. ಈ ಹಂತದಲ್ಲಿ ಸರ್ಕಾರ ಕೈ ಹಿಡಿಯದೇ ಹೋದರೆ, ಪತ್ರಿಕಾ ಉದ್ಯಮವು ಮುಂದೆಬಹುದೊಡ್ಡ ನಷ್ಟ ಅನುಭವಿಸುವ ಸಾಧ್ಯತೆಗಳಿಗೆ ಎಂದು ಅದು ಹೇಳಿದೆ.

‘ಕೊರೊನಾ ವೈರಸ್‌ ಸೋಂಕು ತಡೆಯುವ ಕ್ರಮವಾಗಿ ದೇಶದಾದ್ಯಂತ ಜಾರಿಗೊಳಿಸಲಾದ ಲಾಕ್‌ಡೌನ್‌ನಿಂದಾಗಿ ಪತ್ರಿಕೆಗಳಿಗೆ ಆದಾಯ ತಂದು ಕೊಡುವ ಜಾಹೀರಾತು ಅಥವಾ ಪ್ರಸರಣೆಗೆ ದೊಡ್ಡ ಮಟ್ಟದಲ್ಲಿ ತೊಂದರೆಯಾಗಿದೆ. ಹೀಗಾಗಿ ಉದ್ಯಮವು ನಷ್ಟ ಅನುಭವಿಸುತ್ತಿದೆ,’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಐಎನ್‌ಎಸ್ ಉಲ್ಲೇಖಿಸಿದೆ.

‘ಪತ್ರಿಕಾ ಉದ್ಯಮವು ಕಳೆದ ಎರಡು ತಿಂಗಳಲ್ಲಿ ಈಗಾಗಲೇ ₹4000-4500 ಕೋಟಿ ರೂ. ನಷ್ಟ ಕಂಡಿದೆ. ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿರುವುದರಿಂದ ಖಾಸಗಿ ಉದ್ಯಮ ವಲಯದಿಂದ ಜಾಹೀರಾತುಗಳು ಬರುವ ಸಾಧ್ಯತೆಗಳಿಲ್ಲ. ನಷ್ಟದ ಪ್ರಮಾಣವು ಮುಂದಿನ 6-7 ತಿಂಗಳುಗಳವರೆಗೆ ಹೀಗೆಮುಂದುವರಿಯುವ ಸಾಧ್ಯತೆಗಳಿವೆ. ಹಾಗೇನಾದರೂ ಆದರೆ, ಮುಂದಿನ ₹12,000 - 15,000 ಕೋಟಿ ನಷ್ಟವಾಗುತ್ತದೆ. ಹೀಗಾಗಿ ಸರ್ಕಾರವು ನೆರವನ್ನು ತ್ವರಿತವಾಗಿ ಘೋಷಿಸಬೇಕು,’ ಎಂದು ಐಎನ್‌ಎಸ್ ಅಧ್ಯಕ್ಷ ಶೈಲೇಶ್ ಗುಪ್ತಾ ಸಹಿ ಮಾಡಿದ ಪತ್ರದಲ್ಲಿ ತಿಳಿಸಲಾಗಿದೆ.

ADVERTISEMENT

ಇದೇ ವೇಳೆ, ನ್ಯೂಸ್‌ಪ್ರಿಂಟ್‌ಗಳ ಮೇಲಿನ 5% ಕಸ್ಟಮ್‌ ಸುಂಕವನ್ನು ರದ್ದು ಮಾಡಬೇಕು ಎಂದೂ ಐಎನ್‌ಎಸ್‌ ಕೋರಿದೆ. ಅಲ್ಲದೆ, ಪತ್ರಿಕಾ ಸಂಸ್ಥೆಗಳಿಗೆ ಎರಡು ವರ್ಷಗಳ ತೆರಿಗೆ ರಜೆ ನೀಡಬೇಕು ಎಂದೂ ಆಗ್ರಹಿಸಲಾಗಿದೆ.

‘ಈಗಾಗಲೇ ಆಗಿರುವ ನಷ್ಟವು ಪತ್ರಿಕಾ ಉದ್ಯಮದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ತೊಡಗಿಸಿಕೊಂಡಿರುವ 30 ಲಕ್ಷ ಕಾರ್ಮಿಕರು ಮತ್ತು ಸಿಬ್ಬಂದಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ಇದರಲ್ಲಿ ಪತ್ರಕರ್ತರು, ಮುದ್ರಕರು, ವಿತರಕರು, ಮಾರಾಟಗಾರರೂ ಒಳಗೊಂಡಿದ್ದಾರೆ,’ ಎಂದು ದೇಶದಾದ್ಯಂತ 800 ಕ್ಕೂ ಹೆಚ್ಚು ಪತ್ರಿಕೆಗಳನ್ನು ಪ್ರತಿನಿಧಿಸುವ ಐಎನ್‌ಎಸ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.