ನವದೆಹಲಿ: ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಸಂಪೂರ್ಣ ಸಂಚನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ), ಪ್ರಮುಖ ಸಂಚುಕೋರ ತಹವ್ವುರ್ ರಾಣಾನನ್ನು ಶುಕ್ರವಾರ ತೀವ್ರ ವಿಚಾರಣೆಗೆ ಗುರಿಪಡಿಸಿದೆ.
ವಿಶೇಷ ನ್ಯಾಯಾಲಯವು ಗುರುವಾರ ತಡರಾತ್ರಿ ರಾಣಾನನ್ನು ವಿಚಾರಣೆಗಾಗಿ 18 ದಿನಗಳ ಎನ್‌ಐಎ ಕಸ್ಟಡಿಗೆ ಒಪ್ಪಿಸಿದೆ. ಕಸ್ಟಡಿ ವಿಚಾರಣೆಗೆ ಅನುಮತಿ ನೀಡಿದ ಕೆಲವೇ ಗಂಟೆಗಳಲ್ಲಿ ಎನ್‌ಐಎ ಅಧಿಕಾರಿಗಳು ವಿಚಾರಣೆ ಆರಂಭಿಸಿದರು.
ವಿಚಾರಣೆಯ ನೇತೃತ್ವವನ್ನು ಎನ್‌ಐಎ ಡಿಐಜಿ ಜಯಾ ರಾಯ್ ವಹಿಸಿದ್ದು, ಅವರು ಮುಖ್ಯ ತನಿಖಾಧಿಕಾರಿಯೂ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ರಾಣಾ 18 ದಿನ ಎನ್‌ಐಎ ಕಸ್ಟಡಿಯಲ್ಲಿ ಇರಲಿದ್ದು, 2008ರ ದಾಳಿಯ ಹಿಂದಿನ ಸಂಪೂರ್ಣ ಪಿತೂರಿಯನ್ನು ಬಯಲಿಗೆಳೆಯಲು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಎನ್‌ಐಎ ಶುಕ್ರವಾರ ತಿಳಿಸಿದೆ.
ಅಮೆರಿಕದಿಂದ ಗುರುವಾರ ಭಾರತಕ್ಕೆ ಕರೆತಂದಿದ್ದ ರಾಣಾನನ್ನು ತನಿಖಾ ತಂಡವು ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಆರೋಪಿಯನ್ನು 20 ದಿನ ಕಸ್ಟಡಿಗೆ ನೀಡುವಂತೆ ಎನ್‌ಐಎ ಕೋರಿತ್ತು.
‘ಪಿತೂರಿಯನ್ನು ಎಳೆಎಳೆಯಾಗಿ ಬಹಿರಂಗಪಡಿಸಲು ಅನುಕೂಲವಾಗುವಂತೆ ರಾಣಾನನ್ನು ದೀರ್ಘಾವಧಿಗೆ ಕಸ್ಟಡಿಗೆ ಪಡೆಯುವ ಅಗತ್ಯವಿದೆ. ಮುಂಬೈ ಮೇಲಿನ ದಾಳಿ ಮಾದರಿಯಲ್ಲೇ ದೇಶದ ಇತರ ನಗರಗಳಲ್ಲೂ ದಾಳಿ ನಡೆಸಲು ಸಂಚು ರೂಪಿಸಿರುವ ಶಂಕೆ ಇದೆ’ ಎಂದು ಎನ್‌ಐಎ ಪರ ವಕೀಲರು ನ್ಯಾಯಾಧೀಶರಿಗೆ ತಿಳಿಸಿದ್ದಾಗಿ ಮೂಲಗಳು ಹೇಳಿವೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಚಂದರ್‌ಜೀತ್ ಸಿಂಗ್ ಅವರು ಗುರುವಾರ ತಡರಾತ್ರಿ 1ಕ್ಕೆ ರಾಣಾನನ್ನು ಎನ್‌ಐಎ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದರು. ಅದರ ಬೆನ್ನಲ್ಲೇ ಆತನನ್ನು ಭಾರಿ ಭದ್ರತೆಯೊಂದಿಗೆ ಸಿಜಿಒ ಸಂಕೀರ್ಣದಲ್ಲಿರುವ ಎನ್‌ಐಎ ಕೇಂದ್ರ ಕಚೇರಿಗೆ ಕರೆತರಲಾಯಿತು.
ರಾಣಾನನ್ನು ಎನ್‌ಐಎ ಕೇಂದ್ರ ಕಚೇರಿಯಲ್ಲೇ ವಿಚಾರಣೆಗೆ ಒಳಪಡಿಸಲಾಗುತ್ತದೆ. ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಸ್ಥಳೀಯ ಪೊಲೀಸರು ಮತ್ತು ಅರೆಸೇನಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಕಸ್ಟಡಿಗೆ ಒಪ್ಪಿಸುವಂತೆ ಕೋರಿ ಎನ್‌ಐಎ ವಕೀಲರು ವಾದ ಆರಂಭಿಸುವ ಮುನ್ನ ನ್ಯಾಯಾಧೀಶರು ರಾಣಾನಲ್ಲಿ ‘ವಕೀಲರು ಇದ್ದಾರೆಯೇ’ ಎಂದು ಕೇಳಿದರು. ಅದಕ್ಕೆ ರಾಣಾ ‘ಇಲ್ಲ’ ಎಂದು ಹೇಳಿದಾಗ, ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರವು ವಕೀಲರನ್ನು ಒದಗಿಸಲಿದೆ ಎಂದು ನ್ಯಾಯಾಧೀಶರು ತಿಳಿಸಿದರು. ಆ ಬಳಿಕ ರಾಣಾ ಪರ ವಾದ ಮಂಡಿಸಲು ಪೀಯೂಷ್ ಸಚ್‌ದೇವ್ ಅವರನ್ನು ನೇಮಿಸಲಾಯಿತು.
ಪ್ರತಿದಿನ ವೈದ್ಯಕೀಯ ಪರೀಕ್ಷೆ
ಪ್ರತಿ 24 ಗಂಟೆಗಳಿಗೊಮ್ಮೆ ರಾಣಾನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಸೂಚಿಸಿದ ನ್ಯಾಯಾಲಯ
ಎರಡು ದಿನಗಳಿಗೊಮ್ಮೆ ವಕೀಲರ ಭೇಟಿಗೆ ಅವಕಾಶ
ಎನ್‌ಐಎ ಅಧಿಕಾರಿಗಳ ಸಮ್ಮುಖದಲ್ಲೇ ವಕೀಲರನ್ನು ಭೇಟಿ ಮಾಡಬೇಕು
ಎನ್‌ಐಎ ಕೇಂದ್ರ ಕಚೇರಿಯ ಸೆಲ್‌ನಲ್ಲೇ ವಿಚಾರಣೆ
ತನಿಖೆಗೆ ಎನ್‌ಐಎ ಡಿಐಜಿ ಜಯಾ ರಾಯ್ ನೇತೃತ್ವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.