ಚೆನ್ನೈ: ಭಯೋತ್ಪಾದನೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ, ಅಕ್ಟೋಬರ್ 15ರ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಪಾಕಿಸ್ತಾನ ಗುಪ್ತಚರ ಇಲಾಖೆಯ ಅಧಿಕಾರಿ ಅಮೀರ್ ಜುಬೇರ್ ಸಿದ್ದಿಕಿಗೆ ಎನ್‌ಐಎ ನ್ಯಾಯಾಲಯವು ಸೂಚನೆ ನೀಡಿದೆ.
‘ಚೆನ್ನೈನಲ್ಲಿರುವ ಅಮೆರಿಕದ ದೂತವಾಸ, ಬೆಂಗಳೂರಿನ ಇಸ್ರೇಲ್ ದೂತವಾಸ ಕಚೇರಿ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಸಿದ್ದಿಕಿ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅನ್ವಯ ಪ್ರಕರಣ ದಾಖಲಿಸಿದ್ದು, ಬಳಿಕ ಅವರು ತಲೆಮರೆಸಿಕೊಂಡಿದ್ದರು. ಎರಡೂ ದಾಳಿ ನಡೆದ ವೇಳೆ ಶ್ರೀಲಂಕಾದ ಪಾಕಿಸ್ತಾನಿ ಹೈ ಕಮಿಷನ್ ಕಚೇರಿಯಲ್ಲಿ ವೀಸಾ ಕೌನ್ಸೆಲರ್ ಆಗಿ ಸಿದ್ದಿಕಿ ಕೆಲಸ ಮಾಡುತ್ತಿದ್ದರು. ಪ್ರಕರಣದ ಕುರಿತು ನ್ಯಾಯಾಲಯಕ್ಕೆ ಹಾಜರಾಗಿ, ಉತ್ತರಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಎನ್‌ಐಎ ನ್ಯಾಯಾಲಯವು ಸೆ.2ರಂದು ಪ‍್ರಕಟಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.
ಕ್ರಿಮಿನಲ್ ಸಂಚು, ನಕಲಿ ನೋಟು ಚಲಾವಣೆ ಮಾಡಿದ ಆರೋಪದ ಮೇಲೆ ಸಿದ್ದಿಕಿ ವಿರುದ್ಧ ಐಪಿಸಿ ಹಾಗೂ ಯುಎಪಿಎ ವಿವಿಧ ಕಲಂನ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ತಲೆಮರೆಸಿಕೊಂಡಿದ್ದಾನೆ.
ಅಕ್ಟೋಬರ್ 15ರ ಬೆಳಿಗ್ಗೆ 10.30ರ ಒಳಗಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಪೂನಮಲ್ಲಿಯಲ್ಲಿರುವ ಎನ್‌ಐಎ ನ್ಯಾಯಾಲಯವು ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.