ADVERTISEMENT

ಅಮರಾವತಿ ಔಷಧ ವ್ಯಾಪಾರಿ ಕೊಲೆ ಆರೋಪಿಗಳು ಎನ್‌ಐಎ ವಶಕ್ಕೆ

ಪಿಟಿಐ
Published 5 ಜುಲೈ 2022, 5:38 IST
Last Updated 5 ಜುಲೈ 2022, 5:38 IST
ಎನ್‌ಐಎ ತಂಡ
ಎನ್‌ಐಎ ತಂಡ    

ಮುಂಬೈ: ಅಮರಾವತಿಯ ಔಷಧ ವ್ಯಾಪಾರಿ ಉಮೇಶ್ ಕೊಲ್ಹೆ ಅವರ ಹತ್ಯೆಗೆ ಸಂಬಂಧಿಸಿದ ಎಲ್ಲಾ ಏಳು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಆರೋಪಿಗಳನ್ನು ಸೋಮವಾರ ಅಮರಾವತಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನಂತರ ಎಲ್ಲಾ ಆರೋಪಿಗಳನ್ನು ಎನ್‌ಐಎ ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಅವರು ಹೇಳಿದರು. ಆರೋಪಿಗಳನ್ನು ಜುಲೈ 8 ಅಥವಾ ಅದಕ್ಕೂ ಮೊದಲು ಎನ್‌ಐಎಯ ಮುಂಬೈ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.

‘ಪ್ರವಾದಿ ಮಹಮ್ಮದರನ್ನು ಅಪಮಾನಿಸಿದ ಕಾರಣಕ್ಕಾಗಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್‌ ಶರ್ಮಾ ಅವರನ್ನು ಬೆಂಬಲಿಸಿ ಉಮೇಶ್‌ ಹಾಕಿದ್ದ ಪೋಸ್ಟ್‌ಗೂ, ಉಮೇಶ್‌ ಅವರ ಹತ್ಯೆಗೂ ಸಂಬಂಧವಿರುವ ಸಾಧ್ಯತೆಗಳಿವೆ. ಪ್ರಕರಣವನ್ನು ನಾವು ಮುಚ್ಚಿಹಾಕುವ ಪ್ರಯತ್ನ ಮಾಡಿಲ್ಲ’ ಎಂದು ಪೊಲೀಸ್ ಆಯುಕ್ತರಾದ ಅರ್ತಿ ಸಿಂಗ್ ಸೋಮವಾರ ಹೇಳಿದ್ದಾರೆ.

ADVERTISEMENT

ಕೊಲೆ ಪ್ರಕರಣ ಅತ್ಯಂತ ಸೂಕ್ಷ್ಮ ಸ್ವರೂಪದ್ದಾಗಿದ್ದರಿಂದ ಮತ್ತು ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ಪೊಲೀಸರು ಈ ಹಿಂದೆ ಮಾಹಿತಿ ಬಹಿರಂಗಪಡಿಸಿರಲಿಲ್ಲ ಎಂದು ಅವರು ಹೇಳಿದರು.

ಮುದಸ್ಸರ್ ಅಹ್ಮದ್ (22), ಶಾರುಖ್ ಪಠಾಣ್ (25), ಅಬ್ದುಲ್ ತೌಫಿಕ್ (24) ಶೋಯೆಬ್ ಖಾನ್ (22), ಅತೀಬ್ ರಶೀದ್ (22) ಮತ್ತು ಯೂಸುಫ್ ಖಾನ್ (32) ಮತ್ತು ಪ್ರಕರಣದ ಮಾಸ್ಟರ್‌ ಮೈಂಡ್‌ ಶೇಖ್ ಇರ್ಫಾನ್ ಶೇಖ್ ರಹೀಮ್ ಬಂಧಿತ ಆರೋಪಿಗಳು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಶಂಕಿತ ಶಮೀಮ್ ಅಹ್ಮದ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಜೂನ್ 21 ರಂದು ರಾತ್ರಿ 10 ರಿಂದ 10:30 ರ ನಡುವೆ ಉಮೇಶ್ ಮೇಲೆ ಮೂವರ ತಂಡವು ಚಾಕುವಿನಿಂದ ದಾಳಿ ನಡೆದಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲೇ ಅವರು ಮೃತಪಟ್ಟಿದ್ದರು. ಉಮೇಶ್‌ ಅವರು ನೂಪುರ್ ಶರ್ಮಾ ಅವರ ಪರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.