ADVERTISEMENT

ಈ ವರ್ಷ 9 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ

2024ರ ಲೋಕಸಭೆ ಚುನಾವಣೆಗೂ ಮುನ್ನ ಸೆಮಿಫೈನಲ್‌

ಪಿಟಿಐ
Published 1 ಜನವರಿ 2023, 21:17 IST
Last Updated 1 ಜನವರಿ 2023, 21:17 IST
   

ನವದೆಹಲಿ: ಕರ್ನಾಟಕವೂ ಸೇರಿದಂತೆ 9 ರಾಜ್ಯಗಳಲ್ಲಿ ಈ ವರ್ಷ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, 2024ರ ಲೋಕಸಭಾ ಚುನಾವಣೆಗೂ ಮುನ್ನ ನಡೆಯುವ ಈ ಚುನಾವಣೆಗಳನ್ನು ಸೆಮಿಫೈನಲ್‌ ಎಂದೇ ಪರಿಗಣಿಸಲಾಗಿದೆ.

ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ, ತೆಲಂಗಾಣ ಮತ್ತು ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್‌, ತ್ರಿಪುರಾ, ಮೇಘಾಲಯ ಮತ್ತು ಮಿಜೋರಾಂ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಈ ಪೈಕಿ ನಾಗಾಲ್ಯಾಂಡ್‌, ತ್ರಿಪುರಾ, ಮೇಘಾಲಯದಲ್ಲಿ ವರ್ಷದ ಆರಂಭದಲ್ಲಿ ಅಂದರೆ ಫೆಬ್ರುವರಿ–ಮಾರ್ಚ್‌ನಲ್ಲಿ ಚುನಾವಣೆ ನಡೆಯಲಿದೆ. 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯ ಅವಧಿ ಮೇ 24ರಂದು ಮುಕ್ತಾಯವಾಗಲಿದ್ದು, ಏಪ್ರಿಲ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

ADVERTISEMENT

ವರ್ಷದ ಕೊನೆಯಲ್ಲಿ ಮಿಜೋರಾಂ, ಛತ್ತೀಸಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದೆ. ಛತ್ತೀಸಗಢ ಮತ್ತು ಮಧ್ಯಪ್ರದೇಶ ವಿಧಾನಸಭೆಯ ಅವಧಿಯು ಕ್ರಮವಾಗಿ 2024ರ ಜನವರಿ 3 ಮತ್ತು 6ರಂದು ಮುಕ್ತಾಯಗೊಳ್ಳಲಿದೆ. ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭೆಯ ಅವಧಿ ಕ್ರಮವಾಗಿ 2024ರ ಜನವರಿ 14 ಮತ್ತು 16ರಂದು ಮುಕ್ತಾಯವಾಗಲಿದೆ. ಮಿಜೋರಾಂ ವಿಧಾನಸಭೆಯ ಅವಧಿ ಡಿಸೆಂಬರ್‌ 17ರವರೆಗೂ ಇದೆ. ಈ ಐದು ರಾಜ್ಯಗಳ ಚುನಾವಣೆಯನ್ನು ಒಟ್ಟಿಗೇ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಈ 9 ರಾಜ್ಯಗಳ ವಿಧಾನಸಭಾ ಚುನಾವಣೆ ಜೊತೆಗೆ ಕೇಂದ್ರಾಡಳಿತ ಪ್ರದೇಶವಾದ ಜಮ್ಮು–ಕಾಶ್ಮೀರ ವಿಧಾನ ಸಭೆ ಚುನಾವಣೆ ಕೂಡ ಈ ವರ್ಷವೇ ನಡೆಯುವ ಸಾಧ್ಯತೆ ಇದೆ. ಜಮ್ಮು ಮತ್ತು ಕಾಶ್ಮೀರ ಚುನಾವಣೆಯನ್ನು 2023ರ ಬೇಸಿಗೆಯಲ್ಲಿ ನಡೆಸಲಾಗುವುದು ಎಂದು ಕಳೆದ ಡಿಸೆಂಬರ್‌ 9ರಂದು ಮೂಲಗಳು ತಿಳಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.