ADVERTISEMENT

ಆರ್‌ಟಿಐ ಮೂಲಕ ಅಧಿಕಾರಿಗಳಿಗೆ ಕಿರುಕುಳ: 9 ಮಂದಿ ಕಪ್ಪು ಪಟ್ಟಿಗೆ

‘ಜೀವಮಾನವಿಡೀ ನಿಷೇಧ’ ಕಾನೂನುಬಾಹಿರ– ಎನ್‌ಜಿಒ

ಪಿಟಿಐ
Published 9 ಆಗಸ್ಟ್ 2022, 14:12 IST
Last Updated 9 ಆಗಸ್ಟ್ 2022, 14:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಹಮದಾಬಾದ್: ಮಾಹಿತಿ ಹಕ್ಕು ಕಾಯ್ದೆಯಡಿ ಪುನರಾವರ್ತಿತ ಪ್ರಶ್ನೆಗಳನ್ನು ಕೇಳಿ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದ ಒಂಬತ್ತು ಮಂದಿಯನ್ನು ಗುಜರಾತ್ ಮಾಹಿತಿ ಆಯೋಗವು ಕಪ್ಪು ಪಟ್ಟಿಗೆ ಸೇರಿಸಿದ್ದು, ಅವರು ಕೇಳುವ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ಆದೇಶ ನೀಡಿದೆ.

ಆದೇಶವನ್ನು ವಿಶ್ಲೇಷಿಸಿರುವ ಸರ್ಕಾರೇತರ ಸಂಸ್ಥೆಯೊಂದು (ಎನ್‌ಜಿಒ), ‘ಯಾವುದೇ ಮಾಹಿತಿಯನ್ನು ಪಡೆಯಲು ಜನರಿಗೆ ಜೀವಮಾನವಿಡೀ ನಿಷೇಧ ಹೇರಿರುವ ಕ್ರಮವು ಗುಜರಾತಿನಲ್ಲಿ ಇದೇ ಮೊದಲ ಬಾರಿಗೆ ನಡೆದಿದೆ. ಗುಜರಾತ್ ಮಾಹಿತಿ ಆಯೋಗದ ಈ ಕ್ರಮದ ಕುರಿತು ಆರ್‌ಟಿಐ ಅಡಿ ಕೇಳಲಾದ ಪ್ರಶ್ನೆಗೆ, ಈ ರೀತಿಯ ನಿಬಂಧನೆ ಅಸ್ತಿತ್ವದಲ್ಲಿಲ್ಲ ಎಂದುಕೇಂದ್ರ ಮಾಹಿತಿ ಆಯೋಗವು ತಿಳಿಸಿದೆ’ ಎಂದು ಹೇಳಿದೆ.

‘ಆರ್‌ಟಿಐ ಕಾಯ್ದೆಯಡಿ ಒಂಬತ್ತು ಮಂದಿ ಪುನರಾವರ್ತಿತವಾಗಿ ಅರ್ಜಿಗಳನ್ನು ಸಲ್ಲಿಸಿ, ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದರು. ದುಷ್ಕೃತ್ಯದ ಉದ್ದೇಶಕ್ಕಾಗಿ ಇವರು ಆರ್‌ಟಿಐ ಅಡಿ ಮಾಹಿತಿ ಕೇಳುತ್ತಿದ್ದರು’ ಎಂದು ಗುಜರಾತ್ ಮಾಹಿತಿ ಆಯೋಗವು ಹೇಳಿದೆ.

ADVERTISEMENT

ಹತ್ತು ಮಂದಿ ಆರ್‌ಟಿಐ ಕಾರ್ಯಕರ್ತರ ಪೈಕಿ ಒಂಬತ್ತು ಮಂದಿಯನ್ನು ಕಪ್ಪುಪಟ್ಟಿಗೆ ಸೇರಿಸಿರುವ ಮಾಹಿತಿ ಆಯೋಗವು, ಹಿತೇಶ್ ಪಟೇಲ್ ಎಂಬುವವರಿಗೆ ಐದು ವರ್ಷಗಳ ಕಾಲ ಆರ್‌ಟಿಐ ಅಡಿ ಅರ್ಜಿ ಸಲ್ಲಿಸದಂತೆ ನಿರ್ಬಂಧ ಹೇರಿದ್ದು, ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ ₹ 5 ಸಾವಿರ ದಂಡವನ್ನೂ ವಿಧಿಸಿದೆ.

ನಿಷೇಧಕ್ಕೊಳಗಾಗಿರುವ ಒಂಬತ್ತು ಮಂದಿ ಸೇರಿದಂತೆ ಹಿತೇಶ್ ಪಟೇಲ್ ಅವರು ಗುಜರಾತ್ ಮಾಹಿತಿ ಆಯೋಗದ ಆದೇಶದ ವಿರುದ್ಧ ಹೈಕೋರ್ಟ್‌ ಮೊರೆ ಹೋಗಬಹುದು ಎಂದು ಎನ್‌ಜಿಒದ ಪಂಕ್ತಿ ಜೋಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.