ನೇಹಲ್ ಮೋದಿ
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ಬಹುಕೋಟಿ ಹಗರಣದ ಪ್ರಮುಖ ಆರೋಪಿ, ದೇಶಭ್ರಷ್ಟ ವಜ್ರ ವ್ಯಾಪಾರಿ ನೀರವ್ ಮೋದಿ ಅವರ ಕಿರಿಯ ಸಹೋದರ ನೇಹಲ್ ಮೋದಿಯನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನೇಹಲ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಮೆರಿಕಕ್ಕೆ ಜಂಟಿಯಾಗಿ ಮನವಿ ಸಲ್ಲಿಸಿದ್ದವು.
ನೇಹಲ್ ಮೋದಿಯನ್ನು ಶುಕ್ರವಾರ ಕಸ್ಟಡಿಗೆ ಪಡೆಯಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಭಾರತಕ್ಕೆ ಮಾಹಿತಿ ನೀಡಿದ್ದಾರೆ. ‘ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 17ರಂದು ನಡೆಯಲಿದ್ದು, ನೇಹಲ್ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಆದರೆ, ಕೋರ್ಟ್ ಇದನ್ನು ತಿರಸ್ಕರಿಸಬಹುದು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ (ಪಿಎನ್‌ಬಿ) ₹13 ಸಾವಿರ ಕೋಟಿ ಸಾಲ ಪಡೆದು, ವಂಚಿಸಿದ ಪ್ರಕರಣದಲ್ಲಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರೊಂದಿಗೆ ನೇಹಲ್ ಮೋದಿಯ ಪಾತ್ರವೂ ಇದ್ದು, ಈ ಕುರಿತು ತನಿಖೆ ನಡೆಯಲಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಅಮೆರಿಕದ ಪ್ರಾಸಿಕ್ಯೂಟರ್‌ಗಳ ನೇತೃತ್ವದಲ್ಲಿ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ. ನೇಹಲ್ 2 ಆರೋಪಗಳನ್ನು ಎದುರಿಸುತ್ತಿದ್ದಾರೆ.
2002ರ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಸೆಕ್ಷನ್ 3ರ ಅಡಿಯಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪ
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-B (ಕ್ರಿಮಿನಲ್ ಪಿತೂರಿ) ಮತ್ತು 201 (ಸಾಕ್ಷ್ಯ ನಾಶ) ಆರೋಪ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸಂಬಂಧಿಸಿದ ಬಹುಕೋಟಿ ಹಗರಣದಲ್ಲಿ ನೇಹಲ್, ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತೀಯ ಕಾನೂನುಗಳನ್ನು ಉಲ್ಲಂಘಿಸಿ, ಶೆಲ್ ಕಂಪನಿಗಳು ಮತ್ತು ವಿದೇಶಿ ವಹಿವಾಟುಗಳ ಜಾಲದ ಮೂಲಕ ಅಕ್ರಮ ಹಣವನ್ನು ವರ್ಗಾಯಿಸಲು ಅವರು ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ನೇಹಲ್ ಅವರ ಹೆಸರಿದ್ದು, ಸಾಕ್ಷ್ಯ ನಾಶ ಮತ್ತು ನೀರವ್ ಮೋದಿಗೆ ಕಾನೂನುಬಾಹಿರ ಕೃತ್ಯಗಳಲ್ಲಿ ಉದ್ದೇಶಪೂರ್ವಕವಾಗಿ ಸಹಾಯ ಮಾಡಿದ ಆರೋಪ ಹೊರಿಸಲಾಗಿದೆ.
ಹಣ ಅಕ್ರಮ ವರ್ಗಾವಣೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಭಾರತ ಅವರಿಗೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿ ಹಸ್ತಾಂತರಕ್ಕೆ ಮನವಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.