ADVERTISEMENT

ಪಿಎನ್‌ಬಿ ಪ್ರಕರಣ: ಮಾಫಿ ಸಾಕ್ಷಿಯಾದ ನೀರವ್‌ ಮೋದಿ ಸಹೋದರಿ, ಭಾವ

ಪಿಟಿಐ
Published 7 ಜನವರಿ 2021, 15:48 IST
Last Updated 7 ಜನವರಿ 2021, 15:48 IST
ನೀರವ್‌ ಮೋದಿ
ನೀರವ್‌ ಮೋದಿ   

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ(ಪಿಎನ್‌ಬಿ) ₹14 ಸಾವಿರ ಕೋಟಿ ವಂಚಿಸಿದ ಪ್ರಕರಣದಲ್ಲಿವಜ್ರದ ವ್ಯಾಪಾರಿ ನೀರವ್‌ ಮೋದಿ ಅವರ ಸಹೋದರಿ ಹಾಗೂ ಭಾವ ಮಾಫಿ ಸಾಕ್ಷಿಯಾಗಿದ್ದಾರೆ ಎಂದು ತಿಳಿಸಿರುವ ಜಾರಿ ನಿರ್ದೇಶನಾಲಯವು(ಇ.ಡಿ), ₹579 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವರು ನೆರವಾಗಲಿದ್ದಾರೆ ಎಂದು ಗುರುವಾರ ತಿಳಿಸಿದೆ.

ಪ್ರಸ್ತುತ ಲಂಡನ್‌ ಜೈಲಿನಲ್ಲಿರುವ ನೀರವ್‌ ಮೋದಿ, ಆತನ ಮಾವ ಮೆಹುಲ್ ಚೋಕ್ಸಿ ಹಾಗೂ ಇತರರನ್ನು ಇ.ಡಿ 2018ರಿಂದ ತನಿಖೆಗೆ ಒಳಪಡಿಸುತ್ತಿದೆ. ನೀರವ್‌ ಮೋದಿಯ ಕಿರಿಯ ಸಹೋದರಿ ಪೂರ್ವಿ ಮೋದಿ ಬೆಲ್ಜಿಯಂನ ಪೌರರಾಗಿದ್ದು, ಅವರ ಪತಿ ಮಯಾಂಕ್‌ ಮೆಹ್ತಾ ಬ್ರಿಟಿಷ್‌ ಪ್ರಜೆಯಾಗಿದ್ದಾರೆ. ಅವರು ವಿದೇಶದಲ್ಲೇ ಇದ್ದು, ಇಲ್ಲಿಯವರೆಗೂ ಈ ಪ್ರಕರಣದಲ್ಲಿ ತನಿಖೆಗೆ ಹಾಜರಾಗಿರಲಿಲ್ಲ.

‘ನ್ಯೂಯಾರ್ಕ್‌ನಲ್ಲಿರುವ ಎರಡು ಫ್ಲ್ಯಾಟ್‌ಗಳು, ಲಂಡನ್‌ ಹಾಗೂ ಮುಂಬೈನಲ್ಲಿ ತಲಾ 1 ಫ್ಲ್ಯಾಟ್‌ ಹಾಗೂ ಸ್ವಿಸ್‌ ಬ್ಯಾಂಕ್‌ ಖಾತೆಯಲ್ಲಿರುವ ಹಣ, ಮುಂಬೈನಲ್ಲಿರುವ ಒಂದು ಬ್ಯಾಂಕ್‌ ಖಾತೆ ಸೇರಿದಂತೆ ಒಟ್ಟು ₹579 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಪೂರ್ವಿ ಮೋದಿ ಹಾಗೂ ಮಯಾಂಕ್‌ ಮೆಹ್ತಾ ಸಹಾಯ ಮಾಡಲಿದ್ದಾರೆ’ ಎಂದು ಪ್ರಕಟಣೆಯಲ್ಲಿ ಇ.ಡಿ ತಿಳಿಸಿದೆ.

ADVERTISEMENT

ಪ್ರಕರಣದಲ್ಲಿ ಪೂರ್ವಿ ಮೋದಿಯೂ ಆರೋಪಿಯಾಗಿದ್ದು, ಇವರ ವಿರುದ್ಧ ಇ.ಡಿ ಹಾಗೂ ಸಿಬಿಐ ಹಲವು ಆರೋಪಪಟ್ಟಿಗಳನ್ನು ದಾಖಲಿಸಿದೆ. ಸ್ವಿಸ್‌ ಬ್ಯಾಂಕ್‌ ಖಾತೆ ಸೇರಿದಂತೆ ಅವರ ಹಲವು ಆಸ್ತಿಯನ್ನು ಇ.ಡಿ ಈ ಹಿಂದೆ ಮುಟ್ಟುಗೋಲು ಹಾಕಿಕೊಂಡಿತ್ತು. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ಮುಂಬೈನ ಹಣ ಅಕ್ರಮ ವರ್ಗಾವಣೆ ತಡೆ(ಪಿಎಂಎಲ್‌ಎ) ವಿಶೇಷ ನ್ಯಾಯಾಲಯವು ಕೆಲ ದಿನಗಳ ಹಿಂದಷ್ಟೇ ಒಪ್ಪಿಗೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.