ADVERTISEMENT

ಆಸ್ತಿ ನಗದೀಕರಣಕ್ಕೆ ಮುನ್ನುಡಿ

ಮೂಲಸೌಕರ್ಯ ಯೋಜನೆಗಳಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 21:45 IST
Last Updated 23 ಆಗಸ್ಟ್ 2021, 21:45 IST
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್    

ನವದೆಹಲಿ: ದೇಶದ ಮೂಲಸೌಕರ್ಯ ಯೋಜನೆಗಳಿಗೆ ಸುಸ್ಥಿರವಾಗಿ ಅನುದಾನ ಒದಗಿಸಲು ಕೇಂದ್ರ ಸರ್ಕಾರವು
₹ 6 ಲಕ್ಷ ಕೋಟಿ ಮೊತ್ತದ ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆಯನ್ನು (ಎನ್‌ಎಂಪಿ) ಸೋಮವಾರ ಅನಾವರಣ
ಗೊಳಿಸಿದೆ.

ಈ ಯೋಜನೆಯ ಅಡಿಯಲ್ಲಿ ರೈಲು ನಿಲ್ದಾಣಗಳು, ರಸ್ತೆಗಳು, ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆ ಕೊಳವೆಮಾರ್ಗ, ವಿದ್ಯುತ್ ವಲಯದ ಯೋಜನೆಗಳನ್ನು ಖಾಸಗಿ ವಲಯದ ಕಂಪನಿಗಳಿಗೆ ಲೀಸ್ ಆಧಾರದಲ್ಲಿ ವರ್ಗಾಯಿಸುವ ಉದ್ದೇಶವನ್ನುಕೇಂದ್ರ ಸರ್ಕಾರವು ಹೊಂದಿದೆ. ಹಾಲಿ ಆರ್ಥಿಕ ವರ್ಷದಿಂದ ಅನ್ವಯವಾಗುವಂತೆ ನಾಲ್ಕು ವರ್ಷಗಳ ಅವಧಿಯ ಯೋಜನೆ ಇದು.

ಈಗಾಗಲೇ ಹೂಡಿಕೆ ಮಾಡಿ ಆಗಿರುವ ಆಸ್ತಿಗಳನ್ನು ವರ್ಗಾಯಿಸುವ ಉದ್ದೇಶ ಯೋಜನೆಗೆ ಇದೆ. ಇದರ ಅಡಿಯಲ್ಲಿ ಆಸ್ತಿಯ ಮಾಲೀಕತ್ವವು ಕೇಂದ್ರ ಸರ್ಕಾರದ ಬಳಿಯಲ್ಲೇ ಇರುತ್ತದೆ. ‘ಖಾಸಗಿ ವಲಯದ ಪಾಲುದಾರರು ಆಸ್ತಿಯನ್ನು ನಿರ್ದಿಷ್ಟ ಸಮಯದ ನಂತರ ಕೇಂದ್ರಕ್ಕೆ ವಾಪಸ್ ಕೊಡಬೇಕಾಗುತ್ತದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯೋಜನೆಯನ್ನು ಅನಾವರಣಗೊಳಿಸಿದ ನಂತರ ಸ್ಪಷ್ಟಪಡಿಸಿದರು. ಕೇಂದ್ರವು ಇದರ ಅಡಿಯಲ್ಲಿ ಜಮೀನು ಮಾರಾಟ ಮಾಡುವುದಿಲ್ಲ.

ADVERTISEMENT

‘ಎನ್‌ಎಂಪಿ ಯೋಜನೆಯು ಈಗಾಗಲೇ ಹೂಡಿಕೆ ಮಾಡಿರುವ ಆಸ್ತಿಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಗ್ಗೆ, ಅದರಿಂದ ಹೆಚ್ಚು ಆದಾಯ ಬರುವಂತೆ ಮಾಡುವ ಬಗ್ಗೆ ಗಮನ ನೀಡುತ್ತದೆ. ಖಾಸಗಿ ಕಂಪನಿಗಳನ್ನು ಭಾಗೀದಾರರಾಗು
ವಂತೆ ಮಾಡಿ, ಆಸ್ತಿಗಳಿಂದ ಹೆಚ್ಚು ಆದಾಯ ಲಭ್ಯವಾಗುವಂತೆ ಮಾಡಬಹುದು. ಆದಾಯವನ್ನು ಬಳಸಿಕೊಂಡು ಇನ್ನಷ್ಟು ಮೂಲಸೌಕರ್ಯ ಸೃಷ್ಟಿಸಲು ಮುಂದಾಗಬಹುದು’ ಎಂದು ನಿರ್ಮಲಾ ಅವರು ವಿವರಿಸಿದರು. ಈ ಯೋಜನೆಯು ಆರ್ಥಿಕ ಬೆಳವಣಿಗೆಗೆ ಇಂಬು ಕೊಡುತ್ತದೆ ಎಂದರು.

ಒಟ್ಟು ₹ 6 ಲಕ್ಷ ಕೋಟಿಯ ಪೈಕಿ ₹ 88 ಸಾವಿರ ಕೋಟಿ ಮೌಲ್ಯದ ಆಸ್ತಿಗಳನ್ನು ಈ ವರ್ಷವೇ ನಗದೀಕರಿಸಿಕೊಳ್ಳುವ ಉದ್ದೇಶ ಕೇಂದ್ರದ್ದು ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಮಿತಾಭ್ ಕಾಂತ್ ತಿಳಿಸಿದರು.

ಮೂಲಸೌಕರ್ಯ ಕಾರ್ಯಕ್ರಮಗಳಿಗೆ ಸುಸ್ಥಿರ ರೀತಿಯಲ್ಲಿ ಹಣಕಾಸಿನ ನೆರವು ಒದಗಿಸಲು ಆಸ್ತಿ ನಗದೀಕರಣವು ಮುಖ್ಯ ಹೆಜ್ಜೆ ಎಂದು ಈ ವರ್ಷದ ಬಜೆಟ್‌ನಲ್ಲಿ ಹೇಳಲಾಗಿದೆ.

ವಲಯವಾರು ಆಸ್ತಿ ನಗದೀಕರಣ

ವಲಯ;ಆಸ್ತಿ ಮೌಲ್ಯ

ರಸ್ತೆ;₹ 1.60 ಲಕ್ಷ ಕೋಟಿ

ರೈಲ್ವೆ;₹ 1.52 ಲಕ್ಷ ಕೋಟಿ

ವಿದ್ಯುತ್ ವಿತರಣೆ;₹ 45,200 ಕೋಟಿ

ವಿದ್ಯುತ್ ಉತ್ಪಾದನೆ;₹ 39,832 ಕೋಟಿ

ನೈಸರ್ಗಿಕ ಅನಿಲ ಸಾಗಣೆ ಮಾರ್ಗ;₹ 24,462 ಕೋಟಿ

ದೂರಸಂಪರ್ಕ;₹ 35,100 ಕೋಟಿ

ಗೋದಾಮು;₹ 28,900 ಕೋಟಿ

ಗಣಿಗಾರಿಕೆ;₹ 28,747 ಕೋಟಿ

ವಿಮಾನಯಾನ;₹ 20,782 ಕೋಟಿ

ಬಂದರು;₹ 12,828 ಕೋಟಿ

ಕ್ರೀಡಾಂಗಣ;₹ 11,450 ಕೋಟಿ

ನಗರ ರಿಯಲ್ ಎಸ್ಟೇಟ್;₹ 15,000 ಕೋಟಿ

ಇತರ;₹ 22,504 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.